ಚಿತ್ರದುರ್ಗ : ನಗರಸಭೆ ಸದಸ್ಯರಿಂದ ಲೈಂಗಿಕ ಕಿರುಕುಳ

ಶುಕ್ರವಾರ ಲಿಟ್ಲ ಫ್ಲವರ್ ಶಾಲೆಯ ಸ್ವಾಗತಕಾರಣಿಯಾದ ಅನಿತಾ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ್ ಮತ್ತು ಪ್ರಕಾಶ್ ಗುರುವಾರ ಸಂಜೆ ನನ್ನ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.
ಮೂಲತಃ ಫೈನಾನ್ಸ್ ವ್ಯವಹಾರ ಮಾಡುವ ಪ್ರಕಾಶ್ ಮತ್ತು ಮಲ್ಲಿಕಾರ್ಜುನ್ ಲಿಟ್ಲ ಫ್ಲವರ್ ಶಾಲೆಯ ಮಾಲೀಕರಾದ ಸಂಜೀವ್ ರೆಡ್ಡಿ ಅವರಿಗೆ ಸಾಲ ನೀಡಿದ್ದರು. ಪ್ರತಿ ತಿಂಗಳು ಬಂದು ಸಾಲದ ಕಂತು ತೆಗೆದುಕೊಂಡು ಹೋಗುತ್ತಿದ್ದರು.
ಸಂಜೀವ್ ರೆಡ್ಡಿ ಅನಿತಾ ಬಳಿ ಹಣ ನೀಡಿರುತ್ತಿದ್ದರು. ಮಲ್ಲಿಕಾರ್ಜುನ್ ಮತ್ತು ಪ್ರಕಾಶ್ ಅನಿತಾ ಬಳಿ ಪ್ರತಿ ತಿಂಗಳು ಬಂದು ಹಣ ಪಡೆದು ಹೋಗುತ್ತಿದ್ದರಿಂದ ಅವರ ನಡುವೆ ಪರಿಚಯವಿತ್ತು. ಗುರುವಾರವೂ ಸಾಲದ ಕಂತು ಪಡೆಯಲು ಬಂದ ಇಬ್ಬರು ನಗರಸಭಾ ಸದಸ್ಯರು, ಅನಿತಾ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ.
ತಮ್ಮ ಜೊತೆ ಗೆಸ್ಟ್ ಹೌಸ್ ಗೆ ಬರುವಂತೆ ಒತ್ತಾಯಿಸಿದ್ದಾರೆ. ಆದರೆ, ಅವರಿಂದ ನಾನು ತಪ್ಪಿಸಿಕೊಂಡೆ ಎಂದು ಅನಿತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆರೋಪ ಸುಳ್ಳು : ಅನಿತಾ ಅವರ ಆರೋಪ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ನಗರಸಭಾ ಸದಸ್ಯ ಮಲ್ಲಿಕಾರ್ಜುನ್, ಸಂಜೀವ್ ರೆಡ್ಡಿ ತಮಗೆ 78 ಲಕ್ಷ ರೂ.ಗಳಿಗೂ ಅಧಿಕ ಹಣ ನೀಡಬೇಕಾಗಿದೆ. ಅವರು ಹಣ ನೀಡಲು ತಯಾರಿಲ್ಲ.
ಆದ್ದರಿಂದ ಶಾಲೆಯ ಕೆಲಸಗಾರ್ತಿ ಮುಖಾಂತರ ಅತ್ಯಾಚಾರದ ಆರೋಪ ಹೊರಿಸಿ, ಹಣ ನೀಡದೆ ವಂಚಿಸಲು ತಂತ್ರ ರೂಪಿಸಿದ್ದಾರೆ ಎಂದು ದೂರಿದ್ದಾರೆ. ಸಂಜೀವ್ ರೆಡ್ಡಿ ಅವರಿಂದ ತಕ್ಷಣ ಹಣ ಕೊಡಿಸುವಂತೆ ನಾವು ಪೊಲೀಸರಿಗೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ.












Click it and Unblock the Notifications