ಯುವಕರಿಂದ ಪಕ್ಷ ಬಲಪಡಿಸಲು ರಾಹುಲ್ ಸಜ್ಜು

ಪಕ್ಷವನ್ನು ಸಂಪೂರ್ಣ ಕಾರ್ಪೋರೇಟ್ ಶೈಲಿಯಲ್ಲಿ ಪುನಃ ರಚಿಸಿ ಲೋಕಸಭೆ ಚುನಾವಣೆ ಎದುರಿಸಿ ಗೆಲುವು ಸಾಧಿಸುವುದು ರಾಹುಲ್ ಗಾಂಧಿ ಚಿಂತನೆ. ಆದ್ದರಿಂದ ತಾವು ಸದಾ ಹೇಳುವ ಯುವಕರಿಗೆ ಆದ್ಯತೆ ತತ್ವವನ್ನು ಪಕ್ಷದ ಮಟ್ಟದಿಂದಲೇ ಅನುಷ್ಟಾನಗೊಳಿಸಲು ರಾಹುಲ್ ಗಾಂಧಿ ಬಯಸಿದ್ದಾರೆ.
ಪಕ್ಷದ ಉಪಾಧ್ಯಕ್ಷ ಹುದ್ದೆ ವಹಿಸಿಕೊಂಡ ನಂತರ ಪಕ್ಷದ ಸಂಘಟನೆಯಲ್ಲಿ ಬದಲಾವಣೆ ಮಾಡಲು ಯೋಚಿಸಿದ್ದ ರಾಹುಲ್ ಗಾಂಧಿ ಅವರಿಗೆ ಈಗ ಕಾಲ ಕೂಡಿಬಂದಿದೆ. ಸದ್ಯ ಅಧ್ಯಕ್ಷ ಹುದ್ದೆಯ ಪ್ರಸ್ತಾವನೆ ತಯಾರಾಗಿದ್ದು, ತಾಯಿ ಸೋನಿಯಾ ಗಾಂಧಿ ಅಸ್ತು ಎಂದರೆ ತಕ್ಷಣ ಅನುಷ್ಟಾನಗೊಳಸಲು ರಾಹುಲ್ ಸಜ್ಜಾಗಿ ನಿಂತಿದ್ದಾರೆ.
ಪ್ರಸ್ತಾವನೆ ಏನು : ರಾಹುಲ್ ಗಾಂಧಿ ರಚಿಸಿರುವ ಪ್ರಸ್ತಾವನೆಯಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಯೋಮಿತಿ 35 ರಿಂದ 50 ವರ್ಷ, ಜಿಲ್ಲಾ ಅಧ್ಯಕ್ಷರಿಗೆ 35 ರಿಂದ 65 ಮತ್ತು ರಾಜ್ಯ ಅಧ್ಯಕ್ಷರಿಗೆ 35 ರಿಂದ 65 ವರ್ಷ ನಿಗದಿಗೊಳಿಸಲಾಗಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ ವಯಸ್ಸಾದವರು ಅಧ್ಯಕ್ಷ ಸ್ಥಾನ ತ್ಯಜಿಸುವುದು ಅನಿವಾರ್ಯ.
ಮೂರು ವರ್ಷ ಅಧಿಕಾರ : ಪಕ್ಷದ ಪದಾಧಿಕಾರಿಗಳು ಮೂರು ವರ್ಷ ಒಂದು ಹುದ್ದೆ ನಿರ್ವಹಿಸಬಹು. ಅವರು ಯುವಕರಾಗಿದ್ದರೂ, ಬೇರೆಯವರಿಗೆ ಅವಕಾಶ ನೀಡುವ ದೃಷ್ಠಿಯಿಂದ ತಮ್ಮ ಹುದ್ದೆ ತೊರೆಯಬೇಕು. ಎಲ್ಲಾ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಿವ ಉದ್ದೇಶದಿಂದ ಈ ಪ್ರಸ್ತಾವನೆ ರಚಿಸಲಾಗಿದೆ.
ಅನುಭವವಿರಬೇಕು : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಲು ಮೂರುವರ್ಷ, ಜಿಲ್ಲಾಧ್ಯಕ್ಷರಾಗಲು ಹತ್ತು ವರ್ಷ ಮತ್ತು ರಾಜ್ಯಾಧ್ಯಕ್ಷ ಹುದ್ದೆ ಏರಲು ಅವರು 15 ವರ್ಷಗಳ ಪಕ್ಷ ಸಂಘಟನೆಯ ಅನುಭವ ಹೊಂದಿರಬೇಕು. ಯಾವುದೇ ಒತ್ತಡಕ್ಕೆ ಮಣಿದು, ಅನುಭವವಿಲ್ಲದವರನ್ನು ನೇಮಿಸಬಾರದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ ತಾಣಗಳ ಬಳಕೆ : ಪಕ್ಷಕ್ಕೆ ಹಲವಾರು ಸದಸ್ಯರನ್ನು ನೇಮಿಸಿಕೊಳ್ಳಲು ಸಾಮಾಜಿಕ ತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ. 18 ರಿಂದ 35 ವರ್ಷದ ಯುವಕರು ತಮ್ಮ ಮೊಬೈಲ್ ಸಂಖ್ಯೆ ನೀಡಿ ಕಾಂಗ್ರೆಸ್ ಸದಸ್ಯರಾಗಬಹುದು. ಈ ಕುರಿತ ಪ್ರಸ್ತಾವನೆ ರಚಿಸಲಾಗಿದ್ದು, ಸದ್ಯದಲ್ಲೇ ಎಲ್ಲಾ ರಾಜ್ಯಗಳಲ್ಲೂ ಜಾರಿಗೆ ತರಲು ನಿರ್ಧರಿಸಲಾಗಿದೆ.
ಪಕ್ಷದ ಸಂಘಟನೆ ದೃಷ್ಠಿಯಿಂದ ರಾಹುಲ್ ಗಾಂಧಿ ಉತ್ತಮ ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ನಾಯಕರು ಇದನ್ನು ಒಪ್ಪಿಕೊಳ್ಳುತ್ತಾರೋ, ಈ ಪ್ರಸ್ತಾವನೆ ಜಾರಿಗೆ ಬರುವುದೇ ಎಂದು ಕಾದು ನೋಡಬೇಕು.












Click it and Unblock the Notifications