ವಿಧಾನ ಪರಿಷತ್ ಕಲಾಪ: ಪ್ರಶ್ನೋತ್ತರ ವೇಳೆ ಮಾಯ

ಕಳೆದ ನಾಲ್ಕು ತಿಂಗಳಲ್ಲಿ ಎರಡನೇ ಬಾರಿಗೆ ಉಭಯ ಸದನ ಉದ್ದೇಶಿಸಿ ಮಾತನಾಡುವ ಗೌರವ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೆ ಸಿಗುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಳೆದ ಫೆ.4 ರಂದು ರಾಜ್ಯಪಾಲರು ಭಾಷಣ ಮಾಡಿದ್ದರು.
ಈಗ ಸುಮಾರು 9 ವರ್ಷಗಳ ನಂತರ ಅಧಿಕಾರ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷಕ್ಕೆ ಉಭಯ ಸದನಗಳನ್ನು ನಿಭಾಯಿಸುವ ತಂತ್ರಗಾರಿಕೆಯೂ ಬೇಕಿದೆ.
ಜೂ.3ರಂದು ವಿಧಾನಮಂಡಲದ ಉಭಯ ಸದನ ಉದ್ದೇಶಿಸಿ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಂತರ ವಿಧಾನ ಪರಿಷತ್ತು ಸಭೆ ಸೇರಿ ರಾಜ್ಯಪಾಲರ ಭಾಷಣದ ಪ್ರತಿ ಮಂಡನೆ ಮಾಡಿ ಸದನವನ್ನು ಮುಂದೂಡಲಾಗುತ್ತದೆ ಎಂಡು ವಿಧಾನಪರಿಷತ್ ಸಭಾಪತಿ ಡಿ.ಎಚ್ ಶಂಕರಮೂರ್ತಿ ಹೇಳಿದ್ದಾರೆ.
ಜೂ.4 ರಿಂದ ಜೂ. 7ರವರೆಗೆ ಪರಿಷತ್ ಕಲಾಪ ನಡೆಯಲಿದೆ. ರಾಜ್ಯಪಾಲರ ಸಮಯಾವಕಾಶ ಕೊರತೆಯಿಂದ ಈ ಬಾರಿ ಪ್ರಶ್ನೋತ್ತರ ಅವಧಿ ಇರುವುದಿಲ್ಲ. ಆದರೆ, ವಿಧೇಯಕಗಳ ಮಂಡನೆಗೆ ಅವಕಾಶ ಇರುತ್ತದೆ ಎಂದು ಶಂಕರಮೂರ್ತಿ ಹೇಳಿದರು.
ಪ್ರಶ್ನೋತ್ತರ ವೇಳೆ ಮೊಟಕುಗೊಳಿಸಿರುವುದರಿಂದ ನಿಯಮ 330 ಎ ಅಡಿಯಲ್ಲಿ ಸದಸ್ಯರು ವಿಶೇಷ ಪ್ರಸ್ತಾವ ಮಂಡಿಸಲು ಅವಕಾಶ ಇರುತ್ತದೆ.
ಕರ್ನಾಟಕ ಭೂ ಕಂದಾಯ ತಿದ್ದುಪಡಿ 2012 ವಿಧೇಯಕ ಉಭಯ ಸದನಗಳಲ್ಲಿ ಮಂಡಿಸಿದ ಬಳಿಕ ರಾಜ್ಯಪಾಲರ ಅಂಗೀಕಾರಕ್ಕೆ ಕಳಿಸಲಾಗುತ್ತದೆ. ಈ ಬಾರಿ ಮಂಡನೆಯಾಗುವ ನಿರೀಕ್ಷೆಯಿದೆ.
ವಿಧಾನಪರಿಷತ್ ಕಲಾಪ ವಂದೇಮಾತರಂ ಗೀತೆಯೊಂದಿಗೆ ಆರಂಭವಾಗಲಿದ್ದು ಜೂ.7ರಂದು ಜನಗಣ ಮನ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಗೊಳ್ಳಲಿದೆ ಎಂದು ಸಭಾಪತಿ ಡಿ.ಎಚ್ ಶಂಕರಮೂರ್ತಿ ಹೇಳಿದರು.
ಕೆಳಮನೆ (ವಿಧಾನಸಭೆ) ಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸಭಾಧ್ಯಕ್ಷರಾಗಿದ್ದಾರೆ. ಮೇಲ್ಮನೆ (ವಿಧಾನ ಪರಿಷತ್)ಗೆ ಡಿ. ಎಚ್ ಶಂಕರಮೂರ್ತಿ ಅವರು ಸಭಾಪತಿಯಾಗಿದ್ದಾರೆ.












Click it and Unblock the Notifications