ಸೆಟ್ ಟಾಪ್ ಬಾಕ್ಸ್ ಸಹವಾಸ ಸಾಕಪ್ಪಾ ಸಾಕು
ಬೆಂಗಳೂರು ಮತ್ತು ಮೈಸೂರು ನಗರದಲ್ಲಿ ಕೇಂದ್ರ ಸರಕಾರ ಸೆಟ್ ಟಾಪ್ ಬಾಕ್ಸ್ ಕಡ್ಡಾಯಗೊಳಿಸಿ ಟಿವಿ ವೀಕ್ಷಕರಿಗೆ ಹೊಸದಾದ ತಲೆನೋವನ್ನು ಬೋನಸಾಗಿ ನೀಡಿದೆ.
ಒಂದಲ್ಲಾ ಒಂದು ಪ್ರಾಬ್ಲಂ ಟಿವಿ ವೀಕ್ಷಕರು ಪ್ರತಿದಿನ ಅನುಭವಿಸುವಂತಾಗಿದೆ. ಪ್ರತಿನಿತ್ಯ ಕೇಬಲ್ ಆಪರೇಟರ್ ಕಚೇರಿ ಮುಂದೆ ಗ್ರಾಹಕರ ಪರದಾಟ.
ಪ್ರಮುಖವಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಸೆಟ್ ಟಾಪ್ ಬಾಕ್ಸ್ ಕುರಿತಾದ ಸಮಸ್ಯೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಹನುಮಂತನಗರದ ನಿವಾಸಿ, ನಾಲ್ಕೈದು ಮನೆಗಳನ್ನು ಬಾಡಿಗೆ ನೀಡಿ ಸಣ್ಣದಾದ ಕಿರಾಣಿ ಅಂಗಡಿಯನ್ನು ಇಟ್ಟುಕೊಂಡಿರುವ ಎಸ್ ಆರ್ ಜಗದೀಶ್ ಅವರನ್ನು ಈ ಸಂಬಂಧ ಮಾತಿಗೆಳೆದಾಗ ಅವರು ತಮ್ಮ ಸಿಟ್ಟು, ಅಸಾಹಯಕತೆಯನ್ನು ಹೊರಹಾಕಿದ್ದು ಹೀಗೆ.

ಪ್ರ: ನಮಸ್ಕಾರ. ಸೆಟ್ ಟಾಪ್ ಬಾಕ್ಸಿಗೆ ಎಷ್ಟು ಕೊಟ್ರೀ ಸ್ವಾಮಿ?
ಜಗದೀಶ್: ಮೊದಲೇ ನಾಲ್ಕೈದು ಜನರನ್ನ ವಿಚಾರಿಸಿದ್ದೆ. 1400/- ರೂಪಾಯಿ ಕೊಟ್ವಿ.
ಪ್ರ: ಬೆಳಗ್ಗೆಯಿಂದ ರಾತ್ರಿಯವರೆಗೆ ಅಂಗಡೀಲೇ ಇರ್ತೀರಲ್ವಾ, ಟಿವಿಯನ್ನು ಯಾವ ಸಮಯದಲ್ಲಿ ನೋಡ್ತೀರಾ?
ಜಗದೀಶ್ : ಮಧ್ಯಾಹ್ನ ಮತ್ತು ರಾತ್ರಿ ನೋಡ್ತೀನಿ. ಟಿವಿ ಹುಚ್ಚು ಅಷ್ಟೇನೂ ಇಲ್ಲ, ಆದ್ರೂ ಬೇಕಾಗಿರುವ ಚಾನೆಲ್ ಸಿಕ್ಕಿಲ್ಲಾಂದ್ರೆ ಏನು ಪ್ರಯೋಜನ ಹೇಳಿ?
ಪ್ರ: ಯಾವ ಕಾರ್ಯಕ್ರಮ ಇಷ್ಟ ಪಡ್ತೀರಾ?
ಜಗದೀಶ್ : ಹೆಚ್ಚಾಗಿ ನಾನು ನೋಡೋದು ನ್ಯೂಸ್ ಚಾನೆಲ್. ಮನೆಯಲ್ಲಿ ಬಿಗ್ ಬಾಸ್, ಕೋಟ್ಯಾಧಿಪತಿ, ಈಟಿವಿಯುಲ್ಲಿ ಬರುವ ಧಾರವಾಹಿ ನೋಡ್ತಾರೆ.
ಪ್ರ: ಸೆಟ್ ಟಾಪ್ ಬಾಕ್ಸ್ ಹಾಕಿದ ಮೇಲೆ ಕ್ವಾಲಿಟಿ ಚೆನ್ನಾಗಿ ಬರುತ್ತಿದೆಯಾ?
ಜಗದೀಶ್ : ಅಯ್ಯೋ ಏನು ಕ್ವಾಲಿಟಿ ಮಣ್ಣಂಗಟ್ಟೆ ಸ್ವಾಮಿ. ಇವತ್ತು ಬರೋ ಚಾನೆಲ್ ನಾಳೆ ಬರೋಲ್ಲಾ. ಎಷ್ಟು ಬರುತ್ತೋ ಅಷ್ಟು ನೋಡ್ಕೊಂಡು ಆರಾಮಾಗಿದ್ವಿ.
ಪ್ರ: ಸೆಟ್ ಟಾಪ್ ಬಾಕ್ಸ್ ನಿಂದ ಬೇರೆ ಏನು ಸಮಸ್ಯೆ ಇದೆ?
ಜಗದೀಶ್ : ಅಕ್ಷರ ಮತ್ತು ದೃಶ್ಯಗಳು ಪೂರ್ತಿ ಕಾಣಿಸಲ್ಲಾ. ಮಾತಾಡುವುದಕ್ಕೂ ದೃಶ್ಯಕ್ಕೂ ಹೊಂದಾಣಿಕೆಯಾಗಲ್ಲ. ಸುವರ್ಣ ವಾರ್ತೆ, U2 ಮತ್ತು ರಾಜ್ ಮ್ಯೂಸಿಕ್ ಬರುತ್ತಿಲ್ಲ. ಇದ್ದಕ್ಕಿದ್ದಂತೆ ತೆಲುಗು ಮತ್ತು ತಮಿಳು ಚಾನೆಲ್ ಗಳು ಹೆಚ್ಚು ಬರುತ್ತಿದೆ.
ಪ್ರ: ಇದೆಲ್ಲಾ ಸಮಸ್ಯೆಗಳನ್ನು ಕೇಬಲ್ ಆಪರೇಟರ್ ಗಳಿಗೆ ತಿಳಿಸಿಲ್ವಾ?
ಜಗದೀಶ್ : ಕಮ್ಮಿಯಂದ್ರೂ ಹತ್ತು ಸಲಾದ್ರೂ ಫೋನ್ ಮಾಡಿದ್ದೆ. ಮುಂಚೆ ಎಲ್ಲಾ ನಮ್ಮ ಕೈಯಲ್ಲೇ ಇತ್ತು ಅಣ್ಣಾ. ಮುಂಡೆ ಮಕ್ಳು ಎಲ್ಲಾ centralized ಮಾಡಿ ನಮ್ಮ ಕೈಯಲ್ಲಿ ಏನೂ ಇಲ್ಲಾದ ಹಾಗೆ ಮಾಡಿಬಿಟ್ಟವ್ರೆ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸ್ತಾರೆ.
ಪ್ರ: ಎಷ್ಟು ದಿನದೊಳಗೆ ಸಮಸ್ಯೆ ಬಗೆಹರಿಸ್ತಾರಂತೆ?
ಜಗದೀಶ್ : ಈ ತಿಂಗಳೊಳಗೆ ಎಲ್ಲಾ ಸರಿ ಹೋಗುತ್ತೆ ಅಂತಾರೆ ನೋಡೋಣ.












Click it and Unblock the Notifications