ಶೇ.10 ಇಂಕ್ರಿಮೆಂಟ್ ಕೊಟ್ಟು ಕೈತೊಳೆದುಕೊಂಡ ಇನ್ಫಿ

ಕಳೆದ ಆರ್ಥಿಕ ಸಾಲಿನಲ್ಲಿ ಕಂಪನಿಯ ಆರ್ಥಿಕ ಸಾಧನೆ ಶೋಚನೀಯವಾಗಿದ್ದರಿಂದ ಈ ಬಾರಿ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಇಂಕ್ರಿಮೆಂಟ್ ನೀಡುವುದೇ ಇಲ್ಲ ಅಥವಾ ಅತ್ಯಲ್ಪ ಪ್ರಮಾಣದಲ್ಲಿ ನೀಡಲಿದೆ ಎಂದು ಉದ್ಯಮ ಪಂಡಿತರು ವಿಶ್ಲೇಷಿಸಿದ್ದರು. ಆದರೆ ಸಾಧಾರಣ ಎನ್ನಬಹುದಾದ ಶೇ.10 ಇಂಕ್ರಿಮೆಂಟ್ ನೀಡಿರುವುದು ಉದ್ಯೋಗಿಗಳಿಗೆ ಸಮಾಧಾನ ತಂದಿದೆ.
ಕಳೆದ ವರ್ಷ ಉದ್ಯೋಗಿಗಳಿಗೆ ಇಂಕ್ರಿಮೆಂಟುಗಳನ್ನು ಅಕ್ಟೋಬರಿನಲ್ಲಿ ನೀಡಲಾಗಿತ್ತು. ಆಗಲೂ ಕಂಪನಿ ಶೇ. 6ರ ಪ್ರಮಾಣದಲ್ಲಿ ಇಂಕ್ರಿಮೆಂಟ್ ನೀಡಿತ್ತು. ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಕಂಪನಿಗಳಿಂದ ಪೈಪೋಟಿ ಹೆಚ್ಚಾಗಿರುವುದರಿಂದ ಇಷ್ಟಾದರೂ ಇಂಕ್ರಿಮೆಂಟ್ ನೀಡುವುದು ಅನಿವಾರ್ಯವಾಗಿದೆ. ಇದರಿಂದ ಉದ್ಯೋಗಿಗಳು ಕಂಪನಿಯಲ್ಲೇ ಉಳಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಂಪನಿ ತಿಳಿಸಿದೆ.
ಬೆಂಗಳೂರು ಮೂಲದ ದೇಶದ ಎರಡನೆಯ ಅಗ್ರ ಕಂಪನಿ ಇನ್ಫೋಸಿಸ್ ಸೇಲ್ಸ್ ಟೀಂಗಳಿಗೆ ಮತ್ತು ಭಡ್ತಿಯನ್ನೂ ಪಡೆದ ಉದ್ಯೋಗಿಗಳಿಗೆ ಇಂಕ್ರಿಮೆಂಟ್ ಲೆಟರುಗಳನ್ನು ಈಗಾಗಲೇ ನೀಡಿದೆ. ಇತರೆ ವಿಭಾಗಗಳ ಉಳಿದ ನೌಕಕರಿಗೆ ಹಂತಹಂತವಾಗಿ ಪತ್ರಗಳನ್ನು ನೀಡಲಿದೆ ಎಂದು ಕಂಪನಿ ಮೂಲಗಳು ಹೇಳಿವೆ.
ಸಂಬಳ ಹೆಚ್ಚಳಗಳ ಬಗ್ಗೆ ನಮ್ಮ ಉದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರಿಂದ ಪೂರಕ ಫೀಡ್ ಬ್ಯಾಕ್ ಬಂದ ಮೇಲೆಯೇ ಶೇ. 10ರ ಇಂಕ್ರಿಮೆಂಟಿಗೆ ಕಂಪನಿ ಅಂಕಿತ ಹಾಕಿದೆ. ಉದ್ಯೋಗಿಗಳು ಇದಕ್ಕೆ ಸಹಮತ ಸೂಚಿಸಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆ/ಅಸಮಾಧಾನಗಳು ಸೃಷ್ಟಿಯಾಗದು ಎಂದು ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.
ಕಳೆದ ಆರ್ಥಿಕ ಸಾಲಿನಲ್ಲಿ ಕಂಪನಿ ಗಳಿಸಿದ್ದ ಅತ್ಯಲ್ಪ ಶೇ. 6ರ ಪ್ರಗತಿಯನ್ನು ಪರಿಗಣಿಸಿದರೆ ಈಗಿನ ಸಂಬಳ ಹೆಚ್ಚಳಗಳು ಆಶಾದಾಯಕವಾಗಿವೆ. ಮುಂದಿನ ತ್ರೈಮಾಸಿಕ ಫಲಿತಾಂಶಗಳ ಮೇಲೆ ಇದು ನಕಾರಾತ್ಮಕ ಬೀರುವ ಸಾಧ್ಯತೆಯಿದೆ. ಆದರೆ ಕಂಪನಿಯ ಆದಾಯ ಸುಧಾರಿಸುವ ವಿಶ್ವಾಸವಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.












Click it and Unblock the Notifications