ಪಪ್ಪೂಗೆ ಬೂಂದಿ ಲಾಡು ತಿನ್ನಿಸಿದ ಹೆಂಡತಿ!
ನವದೆಹಲಿ, ಮೇ 22: ಸಿಪಿಎಂ ನಾಯಕ ಅಜಿತ್ ಸರ್ಕಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಂಸದ ಪಪ್ಪು ಯಾದವ್ ಅವರನ್ನು ಹೈಕೋರ್ಟ್ ದೋಷಮುಕ್ತಿಗೊಳಿಸಿದೆ. ಮಂಗಳವಾರ ಜೈಲಿನಿಂದ ಬಿಡುಗಡೆಗೊಂಡ ಮೇಲೆ ಲಡ್ಡು ತಿಂದು ಸಂಭ್ರಮ ಆಚರಿಸಿದ್ದಾರೆ. ಜೈಲಿನಹೊರಗಡೆ ಭಾರಿ ಸಂಖ್ಯೆಯಲ್ಲಿ ಅವರ ಬೆಂಬಲಿಗರು ತಮ್ಮ ನಾಯಕನಿಗೆ ಸ್ವಾಗತ ಕೋರಿದರು.
ನ್ಯಾ. ವಿ. ಎನ್. ಸಿನ್ಹಾ ಹಾಗೂ ನ್ಯಾ.ಕೆ. ಲಾಲ್ ರಿದ್ದ ಪಾಟ್ನಾ ಹೈಕೋರ್ಟ್ ನ ವಿಭಾಗೀಯ ಪೀಠವು ಅಜಿತ್ ಸರ್ಕಾರ್ ಕೊಲೆ ಪ್ರಕರಣದ ಆರೋಪಿಗಳಾದ ಪಪ್ಪು ಯಾದವ್, ಮಾಜಿ ಶಾಸಕ ರಂಜನ್ ತಿವಾರಿ ಹಾಗೂ ಅನಿಲ್ ಕುಮಾರ್ ಯಾದವ್ ರನ್ನು ಕಳೆದ ವಾರ ದೋಷಮುಕ್ತಗೊಳಿಸಿ ಆದೇಶ ಜಾರಿಗೊಳಿಸಿತ್ತು.
ಆರೋಪಿಗಳನ್ನು ಶೀಘ್ರವೇ ಜೈಲಿನಿಂದ ಬಿಡುಗಡೆಗೊಳಿಸುವಂತೆ ಅದು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಮಾಜಿ ಸಿಪಿಎಂ ಶಾಸಕ ಸರ್ಕಾರ್ ಜೂನ್ 14, 1998ರಲ್ಲಿ ಅಪರಿಚಿತ ವ್ಯಕ್ತಿಗಳ ಗುಂಟೇಟಿಗೆ ಬಲಿಯಾಗಿದ್ದರು.

ಯಾರೀತ ಪಪ್ಪು ಯಾದವ್: ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಆರ್ ಜೆಡಿ ಪಕ್ಷದಿಂದ ಲೋಕಸಭೆ ಸದಸ್ಯರಾಗಿದ್ದರು. ಇವರ ಪತ್ನಿ ರಂಜೀತಾ ರಂಜನ್ ಅವರು ಕಾಂಗ್ರೆಸ್ ನ ಮಾಜಿ ಸಂಸದೆಯಾಗಿದ್ದಾರೆ. ಸುಪ್ರೀಂಕೋರ್ಟ್ ನಲ್ಲಿ ನನ್ನ ಜಾಮೀನು ಅರ್ಜಿ ತಿರಸ್ಕಾರಗೊಂಡಾಗ ನನಗೆ ಶಾಕ್ ಆಗಿತ್ತು. ಆದರೆ, ಈಗ ತಡವಾಗಿಯಾದರೂ ನ್ಯಾಯ ಸಿಕ್ಕಿದೆ. ಹಲವು ಬಾರಿ ಆತ್ಮಹತ್ಯೆಯ ಯೋಚನೆ ಕೂಡಾ ಮಾಡಿದ್ದೆ. ನಾನು ಅಮಾಯಕ ಎಂಬುದು ಸಾಬೀತಾಗಿದೆ ಎಂದು ಪಪ್ಪು ಯಾದವ್ ಹೇಳಿದ್ದಾರೆ.
ಆದರೆ, ಅಜಿತ್ ಸರ್ಕಾರ್ ಅವರ ಕುಟುಂಬ ಈ ಆದೇಶವನ್ನು ಪ್ರಶ್ನಿಸಿ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಈ ಮುಂಚೆ ಸುಪ್ರೀಂಕೋರ್ಟ್ ನಲ್ಲಿ ಪಪ್ಪು ಯಾದವ್ ಅವರಿಗೆ ಹಿನ್ನಡೆ ಉಂಟಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಜಿತ್ ಸರ್ಕಾರ್ ಅವರ ಕುಟುಂಬದ ನೋವು ನನಗೆ ಅರ್ಥವಾಗುತ್ತದೆ. ಅವರ ಕಾನೂನಿನ ಹೋರಾಟ ಮುಂದುವರೆಸುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕ್ಷಣ ನಾನು ಖುಷಿಯಾಗಿದ್ದೇನೆ. ಮುಂದಿನ ದಿನದ ಬಗ್ಗೆ ಯೋಚಿಸಿಲ್ಲ. ಯಾವುದೇ ಕೋರ್ಟ್ ವಿಚಾರಣೆಗೂ ಸಿದ್ಧ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ.
1991,1996,1999 ಹಾಗೂ 2004ರಲ್ಲಿ ಬಿಹಾರದ ವಿವಿಧ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪಪ್ಪು ಯಾದವ್ ಅವರು ಸಮಾಜವಾದಿ ಪಕ್ಷ, ಎಲ್ ಜೆಪಿ, ಆರ್ ಜೆಡಿ ಅಲ್ಲದೆ ಪಕ್ಷೇತರರಾಗಿ ಕೂಡಾ ಜಯ ಗಳಿಸಿದ್ದರು. ಅಜಿತ್ ಸರ್ಕಾರ್ ಕೊಲೆ ಕೇಸ್ ನಿಂದಾಗಿ 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. ಯಾದವ್ ಅವರ ಮೇಲೆ ನಿರ್ಬಂಧ ಹೇರಲಾಗಿತ್ತು.
ಬಿಹಾರದ ರಾಬಿನ್ ಹುಡ್ : ಮಾದೇರ ಜಿಲ್ಲೆ ಖುರ್ದಾ ಕರ್ವೆಲ್ಲಿ ಗ್ರಾಮದಲ್ಲಿ ರಾಬಿನ್ ಹುಡ್ ನಂತೆ ಬೆಳೆದ ಪಪ್ಪು ಯಾದವ್ ಅವರು ಜನಾನುರಾಗಿ ನಾಯಕರಾಗಿದ್ದಾರೆ. ಕುಗ್ರಾಮಗಳಿಗೆ ವೈದ್ಯರನ್ನು ಕರೆತಂದು ಉಚಿತ ಚಿಕಿತ್ಸೆ ಕೊಡಿಸಿದ ಉದಾಹರಣೆಗಳಿದೆ. ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದರು. ಕ್ರಿಮಿನಲ್ ಹಿನ್ನಲೆ ಹೊಂದಿದ್ದ ಪಪ್ಪು ಯಾದವ್ ಜನ ನಾಯಕನಾಗಿ ಬೆಳೆದ ಮೇಲೆ ಬಿಹಾರದ ಮಾಫಿಯಾ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದರು.
ಸಿಪಿಐ(ಎಂ) ಶಾಸಕ ಅಜಿತ್ ಸರ್ಕಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1999ರಲ್ಲಿ ಬಂಧಿಸಲ್ಪಟ್ಟ ಪಪ್ಪು ಯಾದವ್ ಗೆ ಸಿಬಿಐ ತನಿಖೆ ಭೀತಿ ಎದುರಾಯಿತು.ಸಿಬಿಐ ತಂಡ ಪಪ್ಪು ಸೇರಿದಂತೆ ನಾಲ್ವರನ್ನು ಸಿಕ್ಕಿಂ ಜೈಲಿನಲ್ಲಿರಿಸಿದರು. ಆದರೆ, ತನ್ನ ಪ್ರಭಾವ ಬಳಸಿ ಬಿಯೂರ್(Beur) ಜೈಲಿಗೆ ವರ್ಗವಾಗುವಲ್ಲಿ ಪಪ್ಪು ಯಶಸ್ವಿಯಾಗಿದ್ದರು. ಜೈಲಿನಲ್ಲಿದ್ದಾಗ 640ಕ್ಕೂ ಅಧಿಕ ಮೊಬೈಲ್ ಕರೆ ಮಾಡಿ ನಿಯಮ ಉಲ್ಲಂಘಿಸಿದ್ದರು. ನಂತರ ಜೈಲಿನಲ್ಲಿ ಫೋನ್ ಜಾಮರ್ ಗಳನ್ನು ಅಳವಡಿಸಲಾಯಿತು.
ನಂತರ ಬೇಲ್ ಪಡೆದು ಹೊರ ಬಂದ ಪಪ್ಪುವನ್ನು ಸಿಬಿಐ ಮತ್ತೊಂದು ಕೇಸ್ ನಲ್ಲಿ ಫಿಟ್ ಮಾಡಿಸಿ ಜೀವಾವಧಿ ಶಿಕ್ಷೆ ಪಡೆಯುವಂತೆ ಮಾಡಿತ್ತು. ಆದರೆ, ಮೇ 17 ರಂದು ಪಾಟ್ನಾ ಹೈಕೋರ್ಟ್ ಪಪ್ಪು ಯಾದವ್ ಅವರನ್ನು ಮುಕ್ತಗೊಳಿಸಿದೆ.












Click it and Unblock the Notifications