ಬಿಬಿಎಂಪಿಯಲ್ಲಿ ಮುಷ್ಕರ, ಜನರ ಪರದಾಟ

ನೂರಾರು ಡೇಟಾ ಆಪರೇಟರ್ ಗಳು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಸೋಮವಾರ ಬೆಳಗ್ಗೆಯಿಂದ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆ ಬಗ್ಗೆ ತಿಳಿಯದೇ ಪಾಲಿಕೆ ಕೇಂದ್ರಕ್ಕೆ ಆಸ್ತಿ ತೆರಿಗೆ ಪಾವತಿ ಸಲು ಆಗಮಿಸಿದ ಸಾರ್ವಜನಿಕರು ಕೆಲಸವಾಗದೇ ಹಿಂದಿರುಗುವ ಪರಿಸ್ಥಿತಿ ಉಂಟಾಗಿದೆ.
ಪ್ರತಿಭಟನೆ ಇಂದು ಮುಂದುವರೆಯಲಿದ್ದು, ಬಿಬಿಎಂಪಿ ಕಚೇರಿಗಳು ಹಾಗೂ ಸಹಾಯ ಕೇಂದ್ರಗಳಲ್ಲಿ ನೌಕರರ ಕೊರತೆ ಎದುರಾಗಲಿದೆ. ಆದ್ದರಿಂದ ಪಾಲಿಕೆ ಕೇಂದ್ರಗಳ ಕೆಲಸಗಳಿದ್ದರೆ, ಎರಡು ದಿನ ಸಾರ್ವಜನಿಕರು ಕಾಯುವುದು ಉತ್ತಮ.
ವಿವಾದವೇನು : ಪಾಲಿಕೆ ಕೇಂದ್ರ ಕಚೇರಿ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಮೂರೂವರೆ ವರ್ಷಗಳಿಂದ 810 ಮಂದಿ ಡೇಟಾ ಆಪರೇಟರ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಕಳೆದ ಆರು ತಿಂಗಳಿನಿಂದ ಇವರಿಗೆ ವೇತನ ಪಾವತಿಸಿಲ್ಲ.
20 ಮಂದಿ ಹಾರ್ಡ್‌ವೇರ್ ಎಂಜಿನಿಯರ್ ಗಳು ಕೆಲಸ ನಿರ್ವಹಿಸುತ್ತಿದ್ದು, ಅವರಿಗೂ ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ನೌಕರರು ಅನಿರ್ಧಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಇವರ ಪ್ರತಿಭಟನೆ ಮುಗಿಯುವ ವರೆಗೂ ಪಾಲಿಕೆ ಕಚೇರಿಗಳ ಕೆಲಸಗಳು ಸ್ಥಗಿತಗೊಳ್ಳಲಿವೆ.
ಡೇಟಾ ಆಪರೇಟರ್ ಗಳಿಗೆ ಮಾಸಿಕ 6,532 ರೂ. ಹಾಗೂ ಹಾರ್ಡ್‌ವೇರ್ ಎಂಜಿನಿಯರ್ ಗಳಿಗೆ 16,180 ರೂ. ವೇತನ ನೀಡಬೇಕು. ಆದರೆ ಈವರೆಗೆ ನಿರ್ದಿಷ್ಟ ದಿನಾಂಕಕ್ಕೆ ಸಂಬಳ ನೀಡಿಲ್ಲ. ಕಳೆದ ಆರು ತಿಂಗಳಿಂದ ವೇತನವನ್ನೂ ನೀಡದಿರುವುದರಿಂದ ನೌಕರರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಯಾರು ಕೊಡಬೇಕು : ನೌಕರರು ಕಿಯೋನಿಕ್ಸ್ ಸಂಸ್ಥೆಯ ಮೂಲಕ ನೇಮಕವಾಗಿದ್ದಾರೆ. ವೇತನ ಬಿಡುಗಡೆ ಬಗ್ಗೆ ಕಿಯೋನಿಕ್ಸ್ ಸಂಸ್ಥೆ ಮತ್ತು ಪಾಲಿಕೆ ಎರಡು ರೀತಿಯ ಉತ್ತರ ನೀಡುತ್ತಿದ್ದಾರೆ. ಕಿಯೋನಿಕ್ಸ್ ಸಂಸ್ಥೆಯ ಅಧಿಕಾರಿಗಳು ಪಾಲಿಕೆ ಈವರೆಗೆ ಹಣ ನೀಡಿಲ್ಲ ಎಂದು ಆರೋಪಿಸುತ್ತಾರೆ.
ಪಾಲಿಕೆ ಅಧಿಕಾರಿಗಳು ನಾವು ಹಣ ನೀಡಿದ್ದೇವೆ ಸಂಸ್ಥೆ ವೇತನ ಪಾವತಿಸಿಲ್ಲ ಎಂದು ಉತ್ತರ ನೀಡುತ್ತಿದ್ದಾರೆ. ಸಂಸ್ಥೆಗಳ ನಡುವಿನ ಗೊಂದಲದಿಂದ ವೇತನ ಬಿಡುಗಡೆಯಾಗದೆ ನೌಕರರು ಪರದಾಡುವಂತಾಗಿದೆ. ನೌಕರರ ಪ್ರತಿಭಟನೆಯಿಂದಾಗಿ ಪಾಲಿಕೆ ಕಚೇರಿಗೆ ಆಗಮಿಸುವ ಸಾರ್ವಜನಿಕರು ತಮ್ಮ ಕೆಲಸವಾಗದೇ ಬರಿಗೈಲಿ ಮರಳುತ್ತಿದ್ದಾರೆ.












Click it and Unblock the Notifications