ಅಗ್ಗದ ಸಾರಾಯಿ ಸಹವಾಸ ಬೇಡವೆಂದ ಸಿದ್ದರಾಮಯ್ಯ

ಏನಪ್ಪಾ ಅಂದರೆ ಸಿಎಂ ಆದ ಮೊದಲ ವಾರದಲ್ಲಿ ಕುಡುಕರಿಗೆ ಅಗ್ಗದ ಆದರೆ ಸುರಕ್ಷಿತ ಸಾರಾಯಿ ವಿತರಿಸುವ ಮಾತನ್ನಾಡಿದ್ದ ಸಿದ್ದು ತಕ್ಷಣವೇ ಎಚ್ಚೆತ್ತುಕೊಂಡಿದ್ದು ಅಗ್ಗದ ಸಾರಾಯಿ ಮತ್ತೆ ಜಾರಿಗೆ ತರುವ ಮಾತನ್ನು ತಳ್ಳಿಹಾಕಿದ್ದಾರೆ. ಅಂದಹಾಗೆ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 2007ರಲ್ಲಿ ರಾಜ್ಯದಲ್ಲಿ ಸಾರಾಯಿ (Arrack) ಮಾರಾಟವನ್ನು ನಿಷೇಧಿಸಿದ್ದರು.
ಪ್ರಮಾಣವಚನ ಸ್ವೀಕರಿಸಿದ ದಿನ ಅಗ್ಗದ ಅಕ್ಕಿ, ಮಾರನೆಯ ದಿನವೇ ಅಗ್ಗದ ಸಾರಾಯಿ ನೀಡುವ ಮಾತನ್ನಾಡಿ 'ಕುಡಿದೂ ಕುಡಿದೂ ಬಾರೋ' ಎಂದು ಕೆಳವರ್ಗದ ಸಾರಾಯಿ ಪ್ರಿಯರನ್ನು ಅಪ್ಪಿಮುದ್ದಾಡಲು ಹೋಗಿದ್ದ ಸಿದ್ದು ಎಚ್ಚೆತ್ತಿದ್ದಾರೆ.
ಸುತ್ತೂರು ಮಠದ ಸಾನ್ನಿಧ್ಯದಲ್ಲಿ ಜ್ಞಾನೋದಯರಾದವರಂತೆ ಮಾತನಾಡಿರುವ ಸಿದ್ದು, ಸರಕಾರಿ ಪ್ಯಾಕೆಟ್ ತರುವ ಬಗ್ಗೆ ತಮ್ಮದು ಕೇವಲ ಚಿಂತನೆಯಷ್ಟೇ. 12 ರೂ. ಗೆ ಸಿಗುತ್ತಿದ್ದ ಪ್ಯಾಕೆಟಿಗೆ ಅದೇ ಜನ ಪಾಪ 50 ರೂ. ಕೊಟ್ಟು ವಿಸ್ಕಿ ಹೀರುತ್ತಿದ್ದಾರೆ. ಇದರಿಂದ ಕುಡುಕ ಬಡವರು ಆರ್ಥಿಕವಾಗಿ ಶೋಚನೀಯ ಸ್ಥಿತಿ ತಲುಪಿದ್ದಾರೆ. ಹಾಗಾಗಿ, ಚೀಪ್ ವೆರೈಟಿ ಸಾರಾಯಿ ಕೊಡೋಕ್ಕೆ ಸಾಧ್ಯವಾ? ಎಂದು ಅಧಿಕಾರಿಗಳನ್ನು ಕೇಳಿದ್ದೆ ಅಷ್ಟೆ' ಎಂದು ಸಮಜಾಯಿಷಿ ನೀಡಿದ್ದಾರೆ.
ನನ್ನ ಹೇಳಿಕೆಯ ಬಗ್ಗೆ ರಾಜ್ಯದಲ್ಲಿ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ವಿಷಯಗಳು ಸಾರ್ವಜನಿಕವಾಗಿ ಚರ್ಚೆಯಾಗುವುದು ನಾಡಿನ ಹಿತದೃಷ್ಟಿಯಿಂದ ಒಳ್ಳೆಯದೇ. ಮಂಥನವಾಗಲಿ ಬಿಡಿ ಎಂದೂ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದು ಹೇಳಿದರು.
ಇಲ್ಲಿ ಸಿದ್ದು ಸಾರಾಯಿ ಬೇಡ ಎಂಬುದು ಸ್ವಾಗತಾರ್ಹ ಎನ್ನುವುದಕ್ಕಿಂತ ಒಬ್ಬ ಮುಖ್ಯಮಂತ್ರಿ ನಾಡಿನ ಜನರ ಭಾವನೆಗಳಿಗೆ ಸ್ಪಂದಿಸಿದರಲ್ಲ ಎಂಬುದು ಸಮಾಧಾನಕರ ಸಂಗತಿಯಾಗಿದೆ. Cheers Siddu! Hic.. Hic.. Hooray!












Click it and Unblock the Notifications