ಫೇಸ್ ಬುಕ್ ಪ್ರೇಮಿ : ಹಣ, ಒಡವೆ ಜೊತೆ ಪರಾರಿ

ಈ ಫೇಸ್ ಬುಕ್ ಲವ್ ಸ್ಟೋರಿಯಲ್ಲಿ ಪ್ರಿಯಕರನ ಹೆಸರು ಅಮಿತ್, ಪ್ರಿಯತಮೆ ಹೆಸರು ರೇಖಾ(ಹೆಸರು ಬದಲಿಸಲಾಗಿದೆ). ರೇಖಾ ಬೆಂಗಳೂರಿನ ರಾಮನೂರ್ತಿ ನಗರದ ನಿವಾಸಿ, ಈಗಷ್ಟೆ ದ್ವಿತೀಯ ಪಿಯುಸಿ ಉತ್ತೀರ್ಣಳಾಗಿ ಪದವಿ ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಾಳೆ.
ಇವಳ ಫೇಸ್ ಬುಕ್ ಪ್ರಿಯಕರ ಅಮಿತ್, ಪಿಇಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ರೇಖಾಳಿಗೆ ನಿನ್ನನ್ನು ವಿವಾಹವಾಗುತ್ತೇನೆ ಮನೆಬಿಟ್ಟು ದುಡ್ಡು ಮತ್ತು ಚಿನ್ನಾಭರಣಗಳೊಂದಿಗೆ ಓಡಿಬರುವಂತೆ ಹೇಳಿದ ಈತ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಆಕೆಯ ಬಳಿ ಇದ್ದ ಹಣ, ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಏನಿದು ಪ್ರಕರಣ : ರೇಖಾ ಮತ್ತು ಅಮಿತ್ ಫೇಸ್ ಬುಕ್ ಮೂಲಕ ಪರಿಚಯವಾದವರು. ಪರಿಚಯ ಪ್ರೀತಿಯಾಗಿ ಬದಲಾಗಿದೆ. ಅಮಿತ್ ವಿವಾಹವಾಗೋಣ ಎಂದಾಗ ರೇಖಾ ಓಕೆ ಎಂದಿದ್ದಾಳೆ. ಅಮಿತ್ ಮಾತಿನಂತೆ ಮನೆಯವರಿಗೆ ತಿಳಿಸದೇ ಆಕೆ ಮನೆಯಿಂದ ಹಣ ಮತ್ತು ಒಡವೆಯೊಂದಿಗೆ ಏ.27ರಂದು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಬಂದು ಸೇರಿದ್ದಾಳೆ.
ರೇಖಾಳಿಗೆ ಕೊಟ್ಟ ಮಾತಿನಂತೆ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ ಅಮಿತ್, ರೇಖಾಳೊಂದಿಗೆ ಲಾಲ್ ಬಾಗ್ ತುಂಬಾ ಸುತ್ತಾಡಿದ್ದಾನೆ. ನಂತರ ನಮ್ಮೂರು ಹುಬ್ಬಳ್ಳಿಗೆ ಹೋಗಿ ವಿವಾಹವಾಗೋಣ ಎಂದು ನಂಬಿಸಿ ರೈಲ್ವೇ ನಿಲ್ದಾಣಕ್ಕೆ ಕರೆತಂದಿದ್ದಾನೆ.
ನಂತರ ಫ್ಲಾಟ್ ಫಾರಂನಲ್ಲಿ ಅವಳನ್ನು ಕೂರಿಸಿ ಟಿಕೆಟ್ ತರುವುದಾಗಿ ಹೇಳಿ ರೇಖಾ ಬಳಿ ಇದ್ದ ಹಣ ಮತ್ತು ಒಡವೆಯ ಬ್ಯಾಗ್, ಮೊಬೈಲ್ ತೆಗೆದುಕೊಂಡು ಹೋದವನು ಅಲ್ಲಿಂದ ಪರಾರಿಯಾಗಿದ್ದಾನೆ. ಮೂರು ಗಂಟೆ ಕಳೆದರೂ ಅಮಿತ್ ಮರಳಲಿಲ್ಲ. ಇದರಿಂದ ಆತಂಕಗೊಂಡ ರೇಖಾ ಮಹಿಳಾ ಪೊಲೀಸರಿಗೆ ಘಟನೆಯ ಬಗ್ಗೆ ಹೇಳಿಕೊಂಡಿದ್ದಾಳೆ.
ಮಹಿಳಾ ಪೊಲೀಸರು ಈಕೆಯನ್ನು ಮನೆಗೆ ಕಳುಹಿಸಿದ್ದಾರೆ. ಮನೆಗೆ ಆಗಮಿಸಿದ ರೇಖಾ ರಾಮಮೂರ್ತಿ ನಗರ ಪೊಲೀಸರಿಗೆ ಅಮಿತ್ ವಿರುದ್ಧ ವಂಚನೆಯ ದೂರು ನೀಡಿದ್ದಾಳೆ. ನನ್ನ ಬಳಿ ಇದ್ದ 2 ಲಕ್ಷ ರೂಪಾಯಿ ಆಭರಣ ಹಾಗೂ 20 ಸಾವಿರ ರೂ. ನಗದು ತೆಗೆದುಕೊಂಡು ಅಮಿತ್ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.
ಎಲ್ಲಾ ನಕಲಿ : ರೇಖಾ ನೀಡಿದ ದೂರಿನ ಅನ್ವಯ ತನಿಖೆ ಮುಂದುವರೆಸಿದ ಪೊಲೀಸರು ಅಮಿತ್ ಫೇಸ್ ಬುಕ್ ಹುಡುಕಾಡಿದ್ದಾರೆ. ಅಮಿತ್ ಹೆಸರು ಮತ್ತು ಫೇಸ್ ಬುಕ್ ನಲ್ಲಿ ಇರುವ ವಿವರಗಳೆಲ್ಲ ನಕಲಿ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಇಎಸ್ ಕಾಲೇಜಿನಲ್ಲಿ ಅಮಿತ್ ಓದುತ್ತಿರುವ ವಿವರಗಳು ಸಹ ನಕಲಿ ಆಗದೆ. ರೇಖಾ ನೀಡಿದ ಅಮಿತ್ ಫೋಟೋ ಸಹ ನಕಲಿಯಾಗಿದ್ದು, ಅವನ ಫೇಸ್ ಬುಕ್ ಅಕೌಂಟ್ ನಲ್ಲಿ ರೇಖಾ ಮಾತ್ರ ಸ್ನೇಹಿತೆಯಾಗಿದ್ದಾಳೆ. ಪ್ರಕರಣ ಪೊಲೀಸರಿಗೂ ಸವಾಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications