ಗೋ ಹತ್ಯೆ, ಬಹುಪತ್ನಿತ್ವ, ಮದ್ಯಪಾನ ನಿಷೇಧಿಸಿ

ದೇಶದಲ್ಲಿ ಗೋಹತ್ಯೆ, ಮದ್ಯಪಾನ ಹಾಗೂ ಬಹುಪತ್ನಿತ್ವ ನಿಷೇಧಕ್ಕೆ ವಿಧೇಯಕ ಮಂಡನೆ ಬಗ್ಗೆ ಮಹಾತ್ಮ ಗಾಂಧಿಯವರ ನೇತೃತ್ವದ ಸ್ವಾತಂತ್ರ್ಯ ಆಂದೋಲನ ಕಾಲದಿಂದಲೂ ಚರ್ಚೆಗೆ ಒಳಪಟ್ಟಿದೆ. ಆದರೆ, ಮದ್ಯಪಾನವನ್ನೇ ಸಂಪೂರ್ಣ ನಿಷೇಧಿಸಲು ಹಿಂಜರೆಯುವ ಸರ್ಕಾರ ಗೋ ಹತ್ಯೆ ಸಂಪೂರ್ಣ ನಿಷೇಧಿಸಲು ಸಾಧ್ಯವೇ? ಎಂದು ರಾಮಾ ಜೋಯಿಸ್ ಪ್ರಶ್ನಿಸಿದ್ದಾರೆ.
1964ರ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿರುವಂತೆ ಯಾವುದೇ ತಿದ್ದುಪಡಿ ಇಲ್ಲದೆ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ನಡೆಸಿದ ಪ್ರಥಮ ಸುದ್ದಿಗೋಷ್ಠಿಯಲ್ಲೇ ಸ್ಪಷ್ಟಪಡಿಸಿದ್ದಾರೆ. ಇದರ ವಿರುದ್ಧ ಬಿಜೆಪಿ ನಾಯಕರು ಸೇರಿದಂತೆ ಹಲವಾರು ಮಂದಿ ತಿರುಗಿಬಿದ್ದಿದ್ದಾರೆ.
ನಿಯಮ ಹೇಗಿರಬೇಕು? : ರೋಗಗ್ರಸ್ತ ಹಾಗೂ ಬಡಕಲು ಗೋವುಗಳನ್ನು ಮಾತ್ರ ಕಡಿಯಬೇಕು. ಚೆನ್ನಾಗಿರುವ, ಆರೋಗ್ಯವಂತ ದೈನಂದಿನ ಬದುಕಿಗೆ ಆಧಾರವಾಗಿರುವ ರಾಸುಗಳನ್ನು ಮುಟ್ಟಬಾರದು ಎನ್ನುವ 1964ರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ. ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗಬೇಕು ಎಂದು ರಾಮಾ ಜೋಯಿಸ್ ಆಗ್ರಹಿಸಿದ್ದಾರೆ.
ಮದ್ಯಪಾನ ಹಾಗೂ ಗೋ ಭಕ್ಷಕರೇ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಹಾಗಿರಲಿ, ಗೋವುಗಳ ರಕ್ಷಣೆ ಹೇಗೆ ಸಾಧ್ಯ.ಬಿಜೆಪಿ ತನ್ನ ಒಳಜಗಳದಿಂದ ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯೊಂದಿಗೆ ಸದನದಲ್ಲಿ ಮಂಡನೆಯಾದರೂ ರಾಜ್ಯಪಾಲರ ಅಂಕಿತ ಪಡೆಯುವಲ್ಲಿ ವಿಫಲವಾಯಿತು.
ಮತಬ್ಯಾಂಕ್ ರಾಜಕೀಯ: ಗೋಹತ್ಯೆ ಬಗ್ಗೆ ಹೇಳಿಕೆ ನೀಡಿ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಕನಸು ಕಾಣುತ್ತಿದ್ದಾರೆ ಅದು ಸಾಧ್ಯವಿಲ್ಲದ ಮಾತು. ನಿತಿಶ್ ಕುಮಾರ್ ಅವರ ಬಿಹಾರ ರಾಜ್ಯಕ್ಕೆ ಕೇಂದ್ರದಿಂದ 10 ಸಾವಿರ ಕೋಟಿ ಅನುದಾನ ಸಿಕ್ಕಿರುವುದು ಲಂಚತನ, ಭ್ರಷ್ಟಾಚಾರದ ಇನ್ನೊಂದು ಮುಖ. ಮತದಾರರು ಜಾಗೃತರಾಗಿದ್ದಾರೆ. ಗೋಹತ್ಯೆ ನಿಷೇಧ, ಮದ್ಯಪಾನ ನಿಷೇಧ ಜಾರಿಗೆ ತಂದರೆ ಸಂವಿಧಾನಕ್ಕೆ ಬೆಲೆ ಕೊಟ್ಟಂತೆ ಆಗುತ್ತದೆ ಎಂದು ರಾಮಾಜೋಯಿಸ್ ಹೇಳಿದ್ದಾರೆ.












Click it and Unblock the Notifications