ಮೈ ಬಿಎಂಟಿಸಿ.ಕಾಂಗೆ ಭೇಟಿ ನೀಡಿದ್ರಾ?
ಬೆಂಗಳೂರು, ಮೇ 6 : ಸದಾ ಪ್ರಯೋಗ ಶೀಲ ಪ್ರಯತ್ನದ ಮೂಲಕ ಜನಸ್ನೇಹಿ ಆಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತೊಂದು ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮೈಬಿಎಂಟಿಸಿ.ಕಾಂ ಎಂಬ ನೂತನ ವೆಬ್ ಸೈಟ್ ಬಿಡುಗಡೆ ಮಾಡಿರುವ ಬಿಎಂಟಿಸಿ ಪ್ರಯಾಣಿಕರ ಪ್ರತಿಕ್ರಿಯೆಗಾಗಿ ಕಾತುದಿಂದ ಕಾಯುತ್ತಿದೆ.
ನೂತನ ವೆಬ್ ಸೈಟ್ ಮೂಲಕ ನಗರದಲ್ಲಿ ಯಾವ ಬಸ್ ಎಷ್ಟು ಹೊತ್ತಿಗೆ ಬರಲಿದೆ?, ನೀವು ತಲುಪಬೇಕಾದ ದೂರವೆಷ್ಟು?, ಪ್ರತಿ ಬಸ್ ಗಳ ವೇಳಾಪಟ್ಟಿ ಹೀಗೆ ಹತ್ತು ಹಲವು ಮಾಹಿತಿಗಳು ಸರಳವಾಗಿ ಪ್ರಯಾಣಿಕರಿಗೆ ಕಿರುಬೆರಳಿನ ತುದಿಯಲ್ಲಿ ದೊರೆಯಲಿವೆ.
ಬಸ್ ತೆರಳುವ ಮಾರ್ಗದಲ್ಲಿ ಅಡಚಣೆಗಳು ಉಂಟಾದರೆ ಪರ್ಯಾಯ ಮಾರ್ಗದ ವಿವಿರಗಳನ್ನು ವೆಬ್ ಸೈಟ್ ಒಳಗೊಂಡಿದೆ. ಎರಡು ದಿನಗಳ ಹಿಂದೆ ಈ ವೆಬ್ ಸೈಟ್ ಲೋಕಾರ್ಪಣೆಗೊಂಡಿದ್ದು, ಸದ್ಯ ಪ್ರಯಾಣಿಕ ಸೇವೆಗೆ ಲಭ್ಯವಿದೆ. ಪ್ರಯಾಣಿಕರಿಂದ ಬರುವ ಪ್ರತಿಕ್ರಿಯೆ ಆಧರಿಸಿ ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಆಲೋಚನೆಯೂ ಬಿಎಂಟಿಸಿ ಮುಂದಿದೆ.
ಮಾಸಿಕ ಪಾಸ್ ಗಳ ವಿವರ, ಬಿಎಂಟಿಸಿ ಬಸ್ ಗಳನ್ನು ಬಾಡಿಗೆ ಪಡೆಯುವುದು ಹೇಗೆ?, ಪ್ರತಿ ಕಿ.ಮೀ.ಪ್ರಯಾಣದರ ಹೀಗೆ ಹತ್ತು ಹಲವು ಮಾಹಿತಿಗಳನ್ನು ನೂತನ ವೆಬ್ ಸೈಟ್ ಒಳಗೊಂಡಿದೆ. ಕನ್ನಡ ಭಾಷೆಯಲ್ಲೂ ಮಾಹಿತಿಗಳು ಲಭ್ಯವಿದ್ದು, ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಮೊದಲು ಸಂಸ್ಥೆಯ ಮಾಹಿತಿ
ವೆಬ್ ಸೈಟ್ ನ ಪ್ರಥಮ ಪುಟ(ಹೋಂ ಪೇಜ್) ಸಂಸ್ಥೆಯ ಬಗ್ಗೆ ಮಾಹಿತಿ ತಿಳಿಸುತ್ತದೆ. ಇದರಲ್ಲಿ ಲಭ್ಯವಿರುವ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಬೇಕಾದ ಮಾಹಿತಿ ಕನ್ನಡದಲ್ಲಿಯೂ ದೊರೆಯುತ್ತದೆ. ಸಂಸ್ಥೆಯ ಸಾಧನೆ, ಅಂಕಿ ಅಂಶಗಳು, ಪ್ರಶಸ್ತಿಗಳ ಮಾಹಿತಿ ಈ ಪುಟದಲ್ಲಿ ಲಭ್ಯವಿದೆ.

ಟ್ರಿಪ್ ಪ್ಲಾನರ್ (trip planner)
ವೆಬ್ ಸೈಟ್ ನಲ್ಲಿ Trip planner ಎಂಬ ಮಾಹಿತಿಗಳಿದ್ದು, ನೀವು ಎಲ್ಲಿಂದ ಎಲ್ಲಿಗೆ ತೆರಳಬೇಕು ಎಂಬ ಮಾಹಿತಿ ನಮೂದಿಸಿದರೆ ಸಾಕು. ನೀವು ಹೋಗುವ ಮಾರ್ಗ ಸಂಖ್ಯೆ, ಬಸ್ ನಂ, ಹೊರಡುವ ಸಮಯ, ಸಾಮಾನ್ಯ ದರ್ಜೆಯಿಂದ ವೋಲ್ವೋ ವರೆಗೆ ಆ ಮಾರ್ಗದಲ್ಲಿ ಚಲಿಸುವ ಬಸ್ ಗಳ ವಿವರಗಳು ತೆರೆದುಕೊಳ್ಳಲಿದೆ.

ವೇಳಾಪಟ್ಟಿ
ನಗರದಲ್ಲಿ ಸಂಚರಿಸುವ ಪ್ರತಿಯೊಂದು ಬಸ್ ಗಳ ವೇಳಾಪಟ್ಟಿ ಇಲ್ಲಿ ಪ್ರಕಟವಾಗಲಿದೆ. ಯಾವ ನಿಲ್ದಾಣದಿಂದ ಬಸ್, ಎಲ್ಲಿಗೆ, ಎಷ್ಟು ಹೊತ್ತಿಗೆ ತೆರಳಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಸಾಮಾನ್ಯ ಮಾರ್ಗದಿಂದ, ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಬಸ್ ಗಳ ವೇಳಾಪಟ್ಟಿ ಇಲ್ಲಿ ತಿಳಿಯಲಿದೆ.

ಶುಲ್ಕಗಳ ಮಾಹಿತಿ
ಬಿಎಂಟಿಸಿ ಬಸ್ ಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ನಿಮ್ಮದಾಗಿದ್ದರೆ ನೀವು ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಕನಿಷ್ಠ ದರದಿಂದ ಪ್ರಾರಂಭಗೊಂಡು, ಯಾರಿಗೆ ಎಷ್ಟು ದರವೆಂಬ ಸಂಪೂರ್ಣ ಮಾಹಿತಿ www.mybmtc.com ನಲ್ಲಿ ಲಭ್ಯವಿದೆ.

ಕನ್ನಡಕ್ಕೆ ಜೈ
ಸಾಮಾನ್ಯ ಜನರಿಗೂ ಅನುಕೂಲವಾಗಲು ಕನ್ನಡ ಭಾಷೆಯಲ್ಲಿಯೂ ಮಾಹಿತಿ ನೀಡಲಾಗಿದೆ. ಬಿಎಂಟಿಸಿ ಬಸ್ ಬಾಡಿಗೆ ಪಡೆಯುವುದು ಹೇಗೆ ? ಎಷ್ಟು ದರ ವಿಧಿಸಲಾಗುತ್ತದೆ ಎಂಬುದರ ಸಮಗ್ರ ಚಿತ್ರಣವನ್ನು ವೆಬ್ ಸೈಟ್ ಒಳಗೊಂಡಿದೆ.












Click it and Unblock the Notifications