ಯಲಹಂಕ : ವಿವಾಹ ನಿಶ್ಚಯವಾಗಿದ್ದ ಯುವಕ ಸಾವು

ಯಲಹಂಕ ಸಮೀಪದ ಕೋಗಿಲು ಬಾಲಾಜಿ ಲೇಔಟ್ ನ ನಿವಾಸಿಯಾಗಿದ್ದ ಸಂತೋಷ್ ಕುಮಾರ್ (24) ಮೃತ ಯುವಕ. ಭಾನುವಾರ ಸಂಜೆ ಮತ ಹಾಕಿ ಬರುತ್ತೇನೆ ಎಂದು ಮನೆಯಿಂದ ತೆರಳಿದ್ದ ಸಂತೋಷ್ ಮನೆಗೆ ವಾಪಸ್ ಆಗಿರಲಿಲ್ಲ.
ಸೋಮವಾರ ಬೆಳಗ್ಗೆ ಮನೆಯವರು ಹುಡುಕಲು ಪ್ರಾರಂಭಿಸಿದಾಗ, ಮನೆಯ ಬಳಿಯ ಖಾಲಿ ನಿವೇಶನವೊಂದರಲ್ಲಿ ಸಂತೋಷ್ ಶವ ಪತ್ತೆಯಾಗಿದೆ. ತಕ್ಷಣ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಂತೋಷ ಸಾವಿಗೆ ವಿಷ ಪ್ರಾಶನ ಕಾರಣ ಎಂದು ತಿಳಿದು ಬಂದಿದ್ದು, ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಿವಿಲ್ ಇಂಜಿನಿಯರ್ ಆಗಿದ್ದ ಸಂತೋಷ್ ಗೆ ಮದುವೆ ನಿಶ್ಚಯವಾಗಿತ್ತು. ಇದೇ ತಿಂಗಳ 27ರಂದು ಆತನ ವಿವಾಹವಾಗಬೇಕಿತ್ತು. ಆದರೆ, ಹಸೆಮಣೆ ಏರಬೇಕಾದ ಹುಡುಗ ಶವವಾಗಿದ್ದಾನೆ.
ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ.
ರಮ್ಯಾ ಸಾವು : ಆನೇಕಲ್ ತಾಲೂಕಿನ ಮುತ್ತುಕಟ್ಟಿ ಗ್ರಾಮದ ಮಾವಿನ ತೋಪಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರಮ್ಯಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಏ.24ರಂದು ಆನೇಕಲ್ ಬಳಿ ಪತ್ತೆಯಾದ ಇವಳನ್ನು ವಿಕ್ಟೋರಿಯಾ ಆಸ್ಪತ್ರಗೆ ದಾಖಲಿಸಲಾಗಿತ್ತು.
ಪ್ರಿಯಕರನೊಟ್ಟಿಗೆ ಮಾವಿನ ತೋಪಿಗೆ ತೆರಳಿದ್ದ ರಮ್ಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಲಾಗಿತ್ತು. ರಮ್ಯಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಪ್ರಿಯಕರ ಅಲ್ಲಿಂದ ಪರಾರಿಯಾಗಿದ್ದ. ನಂತರ ಆತ ಆತ್ಮಹತ್ಯೆ ಮಾಡಿಕೊಂಡಿದ್ದ.












Click it and Unblock the Notifications