ಬಿಜೆಪಿ 'ಎಕ್ಸಿಟ್' ಪೋಲ್: ಕಾಂಗ್ರೆಸ್ ಏನು, ಎತ್ತ?
ಬೆಂಗಳೂರು, ಮೇ 6: ನಿನ್ನೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳಿದ್ದೇ. ಈ ನಡುವೆ ಬಹುತೇಕ ಎಲ್ಲ ಮಾಧ್ಯಮಗಳಿಂದಲ್ಲೂ ಎಕ್ಸಿಟ್ ಪೋಲ್ ಹರಿದುಬರುತ್ತಿದೆ. ಎಲ್ಲ ಮಾಧ್ಯಮಗಳ ಫಲಿತಾಂಶವೂ ಬಹುತೇಕ ಒಂದೇ ದಿಕ್ಸೂಚಿಯಂತಿದೆ. ಏನಪಾ ಅಂದರೆ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅದು exit ಆಗಿದೆ. ಇದರಿಂದ excite ಆಗಿರುವುದು ಪ್ರಮುಖ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್!
ಈ 'ಎಕ್ಸಿಟ್' ಪೋಲ್ ಫಲಿತಾಂಶವು ಬಿಜೆಪಿಗೆ ಮಹಾಸೋಲು ಕಟ್ಟಿಟ್ಟಬುತ್ತಿ ಎನ್ನುತ್ತಿವೆ. ಹಾಗಾದರೆ ಕಾಂಗ್ರೆಸ್ ಏನು, ಎತ್ತ ಎಂಬ ಕುತೂಹಲ ಈಗ ಗರಿಗೆದರಿದೆ. ಈ ಮಧ್ಯೆ, ಬಿಜೆಪಿ 2008ರ ಫಲಿತಾಂಶದಲ್ಲಿ ಗಳಿಸಿದ್ದ ಸ್ಥಾನಗಳಲ್ಲಿ 50ಕ್ಕೂ ಹೆಚ್ಚು ಸ್ಥಾನ ಕಳೆದುಕೊಳ್ಳಲಿದೆ. ಇನ್ನು ಜೆಡಿಎಸ್ ಐದಾರು ಸ್ಥಾನ ಹೆಚ್ಚು ಪಡೆಯಲಿದೆ.
ಈ ಸಂದರ್ಭದಲ್ಲಿ ಫಲಿತಾಂಶದ ಮೇಲೆ ಅದರಲ್ಲೂ ಬಿಜೆಪಿ ಸ್ಥಾನಮಾನದ ಮೇಲೆ ಅಗಾಧ/ವ್ಯತಿರಿಕ್ತ ಪರಿಣಾಮ ಬೀರಿದವರೆಂದರೆ undoubltly ಮಾಜಿ ಮುಖ್ಯಮಂತ್ರಿ, ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ. ತನ್ಮೂಲಕ ಯಡಿಯೂರಪ್ಪ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ನೀರೆರೆದಿದ್ದಾರೆ. 'ಎಕ್ಸಿಟ್' ಪೋಲ್ ಆಧಾರದಲ್ಲಿ 113ರ ಮ್ಯಾಜಿಕ್ ನಂಬರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಐದು ದಾರಿಗಳು/ಅವಕಾಶಗಳು ಹೀಗಿವೆ:

ಅರ್ಧಕ್ಕರ್ಧ ಸಾಧನೆಯಾದರೆ
ಒಂದು ವೇಳೆ ಕಾಂಗ್ರೆಸ್ 113 ಸ್ಥಾನ ಪಡೆಯುತ್ತದೆ ಅಂತಾದರೆ ಅದು ತನ್ನದೇ ಕಾಲ ಮೇಲೆ ಸದೃಢವಾಗಿ ನೆಲೆಯೂರಬಹುದು. 113 ದಕ್ಕುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಅಲ್ಲಿಗೇ ಬಿಟ್ಟು 2014ರ ಲೋಕಸಭಾ ಚುನಾವಣೆಯತ್ತ (28 ಸ್ಥಾನಗಳ ಮೇಲೆ) ಮುನ್ನೋಟ ಹರಿಸುತ್ತದೆ. ಅಂದರೆ ಮುಂದಿನ ವರ್ಷದ ವೇಳೆಗೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಿ, ಬೆಳೆಸುವಂತಹ ಬಲಾಢ್ಯ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸಲು ಆಲೋಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಸರಳ ಬಹುಮತಕ್ಕೆ ಸಂಚಕಾರ ಬಂದರೆ
ಒಂದು ವೇಳೆ ಕಾಮಗ್ರೆಸ್ಸಿಗೆ ತೊಂಬತ್ತೋ- ನೂರೋ ಬರುತ್ತೆ ಅಂದ್ಕೊಳ್ಳಿ. ಆಗ ಯಡಿಯೂರಪ್ಪ ರಂಗಪ್ರವೇಶ ಅನಿವಾರ್ಯವಾಗುತ್ತದೆ. ಬಹುಮತ ಬಾರದಿದ್ದರೆ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರಾದರೂ ಅಧಿಕಾರ ಲಾಲಸೆ ಬೇರೆಯದೇ ಅರ್ಥ ಕೊಡುತ್ತದೆ. ಅಂದರೆ ಕೆಜೆಪಿ ಹತ್ತೋ- ಹದಿನೈದೋ ಸ್ಥಾನ ಗಳಿಸಿದರೆ ಯಡಿಯೂರಪ್ಪ ಸಹ ಥಕಥೈ ಎಂದು ಕುಣಿಯುತ್ತಾ ಕಾಂಗ್ರೆಸ್ ಅಂಗಳದಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವೇನೂ ಇಲ್ಲ. ಆಗ ಪಕ್ಕಾ ವ್ಯವಹಾರಕ್ಕೆ ಇಳಿಯುವ ಯಡಿಯೂರಪ್ಪ ತಮಗೇನೂ ಬಯಸದಿದ್ದರೂ ಶೋಭಾ ಕರಂದ್ಲಾಜೆ ಅವರಿಗಾಗಿ ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯಿಡುವುದು ಖಂಡಿತಾ.

ಮೂರೇ ಗೇಣು ಅಡ್ಡಿ ಎಂಬಂತೆ ...
ಸರಳ ಬಹುಮತಕ್ಕೆ ಮೂರೇ ಗೇಣು ಅಡ್ಡಿ ಎಂಬಂತೆ ಕಾಂಗ್ರೆಸ್ಸಿಗೆ 110 ಮಂತು ಅಂತಿಟ್ಕೊಳ್ಳಿ... ಆಗ ಜಯಭೇರಿ ಬಾರಿಸುವ ಐದು ಮಂದಿ ಸ್ವತಂತ್ರರತ್ತ ಕಾಂಗ್ರೆಸ್ ಆಸೆಗಣ್ಣು ಹಾಕುವುದು ಗ್ಯಾರಂಟಿ. ಅವರಲ್ಲಿ ಒಂದಷ್ಟು ಕಾಂಗ್ರೆಸ್ಸಿನದೇ ಬಂಡಾಯ ಶಾಸಕರೂ ಆಗಿರಬಹುದು. ಅಲ್ಲಿಗೆ ಲೆಕ್ಕ ಚುಕ್ತಾ ಆಗುತ್ತದೆ.

ಜೆಡಿಎಸ್ ಜತೆ ಮೈತ್ರಿ ಯಾಕಾಗಬಾರದು?
ಜೆಡಿಎಸ್ ಜತೆ ಮೈತ್ರಿ ಯಾಕಾಗಬಾರದು ಎಂಬ ಆಲೋಚನೆಯೂ ಕಾಂಗ್ರೆಸ್ಸಿಗರಲ್ಲಿ ಮೂಡಿದರೆ ಅಚ್ಚರಿಯೇನಿಲ್ಲ. ಏಕೆಂದರೆ ಅಧಿಕಾರಕ್ಕಾಗಿ ಕೊನೆಗೆ ಏನು ಬೇಕಾದರೂ ಆಗಬಹುದು. ಇದೇ ವೇಳೆ ಜೆಡಿಎಸ್ ಸಹ ಅಧಿಕಾರಕ್ಕಾಗಿ ಹಾತೊರೆಯುತ್ತಿರುವುದು ತಿಳಿದೇ ಇದೆ. ಆದರೆ ಹಿಂದಿನ ಅನುಭವದಲ್ಲಿ ಧರಂ ಸಿಂಗ್ ಅವರಿಗೆ ದೇವೇಗೌಡರಿಂದ ಬರುತ್ತಿದ್ದ ಒಲವಿನ ಪತ್ರಗಳನ್ನು ನೆನಪಿಸಿಕೊಂಡರೆ ಅದರ ಸಹವಾಸವೇ ಬೇಡವೆಂದು ಕಾಂಗ್ರೆಸ್ ಕೈಕಟ್-ಬಾಯ್ಮುಚ್ ಅಂತಾದರೆ ಜೆಡಿಎಸ್ ತೆಪ್ಪಗಿರಬೇಕಾಗುತ್ತದೆ.

ನಿರೀಕ್ಷೆಗಳೆಲ್ಲ ತಲೆಕೆಳಗಾಗಿ 75 ಬರಲಿಲ್ಲಾಂದ್ರೆ
ಎಲ್ಲ ನಿರೀಕ್ಷೆಗಳೂ ತಲೆಕೆಳಗಾಗಿ ಎಪ್ಪತೈದೂ ಬರಲಿಲ್ಲ ಅಂತಾದರೆ... ವಿರೋಧ ಪಕ್ಷದ ಸಾಲು ಕಾಯಂ. ಬಿಜೆಪಿ ಮತ್ತು ಜೆಡಿಎಸ್ 113 ಸ್ಥಾನಗಳಷ್ಟು ಹತ್ತಿರವಾದರೆ ಅಧಿಕಾರಕ್ಕೆ ಬರುವುದು ನಿಶ್ಚಿತ. ಆಗ ಫಿಫ್ಟಿ-ಫಿಫ್ಟಿ ಅಂತಾದರೆ ಮೊದಲು ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದೇ ಕುತೂಹಲ. ಸಿದ್ದುಗೆ ವಿರೋಧಪಕ್ಷದ ನಾಯಕನ ಸ್ಥಾನ ಅಬಾಧಿತ.












Click it and Unblock the Notifications