ಬೆಳಗಾವಿ : ಗಡಿನಾಡಿನಲ್ಲಿ ನರೇಂದ್ರ ಮೋದಿ ಭಾಷಣ

ಬೆಳಗಾವಿಯ ಶ್ರೀನಗರ ಮೈದಾನಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ನರೇಂದ್ರ ಮೋದಿಗೆ ಕಾರ್ಯಕರ್ತರು ಜಯಘೋಷ ಕೂಗುತ್ತಾ ಅದ್ದೂರಿ ಸ್ವಾಗತ ಕೋರಿದರು. ಮಾಜಿ ಸಿಎಂ ಸದಾನಂದ ಗೌಡ, ಸಂಸದ ಪ್ರಭಾಕರ ಕೋರೆ ಮುಂತಾದ ನಾಯಕರು ಮೋದಿಯವರೊಂದಿಗೆ ಆಗಮಿಸಿದರು.
ಬೆಳಗಾವಿಯಲ್ಲಿ ದೊರೆಯುವ ನೀರಿನ ಲಭ್ಯತೆ ಉಪಯೋಗಿಸಿಕೊಂಡು ಕಬ್ಬು ಬೆಳೆದು ಪ್ರಸಿದ್ದಿ ಪಡೆದಿರುವ ರೈತರಿಗೆ ಅಭಿನಂದನೆ ಸಲ್ಲಿಸಿ ಮೋದಿ ತಮ್ಮ ಪ್ರಚಾರ ಭಾಷಣ ಆರಂಭಿಸಿದರು.
ಮೋದಿ ಭಾಷಣದ ಮುಖ್ಯಾಂಶಗಳು | ಕರಾವಳಿಯಲ್ಲಿ ನರೇಂದ್ರ ಮೋದಿ ಅಲೆ ಓದಿ
* ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನಿ, ಸೋನಿಯಾ ಮತ್ತು ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಏಕೆ ಮಾತನಾಡುತ್ತಿಲ್ಲ. ವಿದೇಶದಲ್ಲಿ ಕಪ್ಪು ಹಣ ಇಟ್ಟವರನ್ನು ಕೇಂದ್ರ ಸರ್ಕಾರ ಏಕೆ ರಕ್ಷಿಸುತ್ತಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಾಂಗ್ರೆಸ್ ನಾಯಕರು ಕಳೆದುಕೊಂಡಿದ್ದಾರೆ.
* ಬಿಜೆಪಿ ಸರ್ಕಾರ ಆಡಳಿತ ನಡೆಸುವ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಕರ್ನಾಟಕದ ಪ್ರತಿ ಹಳ್ಳಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ರಾಜ್ಯವನ್ನು ಅಭಿವೃದ್ದಿ ಮಾಡಬೇಕು ಎಂದರೆ ಬಿಜೆಪಿಗೆ ಮತ ನೀಡಿ.
* ಪ್ರಧಾನಿ ಮನಮೋಹನ್ ಸಿಂಗ್ ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರುತ್ತಾರೆ. ದೇಶದ ಎಲ್ಲಾ ರಾಜ್ಯಗಳಿಗೂ ವಿದ್ಯುತ್ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರಕ್ಕೆ ಏಕೆ ಸಾಧ್ಯವಾಗಿಲ್ಲ ? ದೇಶದ ವಿದ್ಯುತ್ ಸಮಸ್ಯೆಗೆ ಕೇಂದ್ರ ಸರ್ಕಾರವೇ ಹೊಣೆ.
* ರಾಜ್ಯ ಸರ್ಕಾರಕ್ಕೆ ಕೇಂದ್ರ ನೀಡಿರುವ ಅನುದಾನದ ಲೆಕ್ಕವನ್ನು ಕೇಳಲು ನೀವು ಅನುದಾನವನ್ನು ವರದಕ್ಷಿಣೆಯಾಗಿ ನೀಡಿದ್ದೀರಾ? ಒಂದು ರಾಜ್ಯಕ್ಕೆ ನೀಡಿದ ಅನುದಾನದ ಲೆಕ್ಕ ಕೇಳುವ ಕೇಂದ್ರ ಸರ್ಕಾರ ಭ್ರಷ್ಟಾಚಾರದಿಂದ ಎಷ್ಟು ಲೂಟಿ ಹೊಡೆದಿದೆ.
* ಒಂದು ರಾಜ್ಯಕ್ಕೆ ಅನುದಾನ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಪ್ರತಿ ರಾಜ್ಯದ ಜನರು ಕೇಂದ್ರ ಸರ್ಕಾರಕ್ಕೆ ನೀಡುವ ತೆರಿಗೆ ಹಣವನ್ನು ಯಾವ ಉದ್ದೇಶಗಳಿಗಾಗಿ ಖರ್ಚು ಮಾಡಿದ್ದೀರಿ ಎಂದು ಜನರಿಗೆ ಉತ್ತರಿಸಿ.
* ರಕ್ಷಣಾ ಇಲಾಖೆಗೆ ಕೋಟಿ ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳುವ ಕೇಂದ್ರ ಸರ್ಕಾರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಏಕೆ ಸಾಧ್ಯವಾಗಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications