ಜನಾರ್ದನ ರೆಡ್ಡಿ 'ಬಾಗಿನ' ಬಗ್ಗೆ ಬಾಯ್ಬಿಟ್ಟ ಸುಷ್ಮಾ
ಮಂಗಳೂರು, ಏ.26: ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ವರ ಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಬಳ್ಳಾರಿಗೆ ಭೇಟಿ ನೀಡಿ, ರೆಡ್ಡಿ ಸೋದರರಿಂದ ಕೋಟ್ಯಂತರ ರೂ ಬಾಗಿನ ಪಡೆದು ಹೋಗುತ್ತಾರೆ ಎಂಬ ಗಂಭೀರವಾದ ಆರೋಪಗಳು ಕೇಳಿಬಂದಿದ್ದವು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಅವರು 'ಬಳ್ಳಾರಿಯ ರೆಡ್ಡಿ ಸಹೋದರರಿಂದ ತಾವು ಯಾವುದೇ ಅಕ್ರಮ ಹಣ ಪಡೆದಿಲ್ಲ' ಎಂದು ಶುಕ್ರವಾರ ಹೇಳಿದ್ದಾರೆ.

ಅತ್ತ ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಚಂಚಲಗೂಡ ಜೈಲು ಪಾಲಾಗುತ್ತಿದ್ದಂತೆಯೇ ರೆಡ್ಡಿ ಸೋದರರ ಜತೆಗಿನ 'ಅಮ್ಮ-ಮಕ್ಕಳ' ಸಂಬಂಧಕ್ಕೆ ಎಳ್ಳು ನೀರು ಬಿಟ್ಟಿದ್ದ ಸುಷ್ಮಾ ಅವರು ಚುನಾವಣೆ ಸಂದರ್ಭದಲ್ಲಿ ಅದರ ಬಗ್ಗೆ ಬಾಯ್ಬಿಟ್ಟಿರುವುದು ಕುತೂಹಲಕಾರಿಯಾಗಿದೆ.
ಇದರಿಂದ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ತಮ್ಮ ಮೇಲಿದ್ದ ಭಾರಿ ಕಳಂಕವನ್ನು ತೊಡೆದು ಹಾಕಿಕೊಳ್ಳಲು ಯತ್ನಿಸಿದ್ದಾರೆ. ರೆಡ್ಡಿ ಜೈಲಿಗೆ ಸೇರಿದಾಗಲೂ 'ತನ್ನ ಮತ್ತು ರೆಡ್ಡಿಗಳ ಮಧ್ಯೆ ಯಾವುದೇ (ಗಣಿ) ವ್ಯಾವಹಾರಿಕ ಸಂಬಂಧ' ಇಲ್ಲ ಎಂದಿದ್ದರು ಸುಷ್ಮಾ.
ಮಂಗಳೂರಿನಲ್ಲಿ ಶುಕ್ರವಾರ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಹಾಗೂ ರೆಡ್ಡಿ ಸಹೋದರರ ನಡುವೆ ಯಾವುದೇ ಹಣಕಾಸಿನ ವ್ಯವಹಾರವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರ ಮಹಾಲಕ್ಷ್ಮಿ ಪೂಜೆಗಾಗಿ ಮಾತ್ರವೇ ತಾನು ಬಳ್ಳಾರಿಗೆ ಹೋಗುತ್ತಿದ್ದೆ. ಈ ವೇಳೆ ರೆಡ್ಡಿಗಳಿಂದ ಹಣ ಪಡೆದಿದ್ದೇನೆ ಎನ್ನುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಸುಷ್ಮಾ ಮತ್ತೆ ಮತ್ತೆ ಹೇಳಿದರು.












Click it and Unblock the Notifications