ಕುಮಾರಸ್ವಾಮಿ ಲೇಔಟ್ : ಪತ್ನಿಯನ್ನು ಕೊಂದ ಪತಿ

ಪಾಪಿ ಪತಿ ರಾಜೇಶ್ ಪತ್ನಿ ಶಾರದ (28) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಶಾರದಾ ಮತ್ತು ರಾಜೇಶ್ ಕೆಲವು ದಿನಗಳಿಂದ ಬೇರೆ-ಬೇರೆಯಾಗಿದ್ದರು. ವಿಚ್ಚೇದನಕ್ಕೂ ಅರ್ಜಿ ಸಲ್ಲಿಸಿದ್ದರು. ದೂರನ್ನು ಹಿಂಪಡೆಯದ ಕಾರಣ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಚುನಾವಣಾ ಪ್ರಚಾರ ಕಾರ್ಯಕ್ಕೆ ಶಾರದಾ ಮೆನಗೆ ಬಂದ ಕಾರ್ಯಕರ್ತರೊಟ್ಟಿಗೆ ಬಂದ ರಾಜೇಶ್ ನಂತರ ಮನೆಯಲ್ಲೇ ಉಳಿದುಕೊಂಡಿದ್ದಾನೆ. ಶಾರದಾಳೊಂದಿಗೆ ಜಗಳವಾಡಿ ಆಕೆಯನ್ನು ಚಾಕುವಿನಿಂದ ಇರಿದ್ದಾನೆ.
ಶಾರದಾ ಕೂಗಾಟ ಕೇಳಿ ಓಡಿಬಂದ ಸ್ಥಳೀಯರು ರಾಜೇಶ್ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ರಾಜೇಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದಾಗಿ ಶಾರದಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇವರಿಗೆ ಮೂವರು ಮಕ್ಕಳಿದ್ದು, ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಪಾಪಿ ಪತಿ ರಾಜೇಶ್ ನನ್ನು ಪೊಲೀಸರು ಬಂಧಿಸಲಿದ್ದಾರೆ.
ದಂಪತಿ ಮೂಲತಃ ಹೆಗ್ಗಡದೇವನಕೊಟೆಯವರಾಗಿದ್ದು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ರಾಜೇಶ್ ಕೊಳಾಯಿ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರೆ, ಶಾರದಾ ಗಾರ್ಮೆಂಟ್ಸ್‌ನಲ್ಲಿ ನೌಕರರಾಗಿದ್ದರು.
ದಂಪತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ, ಶಾರದಾ ಅವರು ಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯದ ಮೆಟ್ಟಿರೇಲಿದ್ದರು. ದೂರು ನೀಡಿದ ನಂತರವೂ ಅವರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಿತ್ತು. ದೂರು ಹಿಂಪಡೆಯುವಂತೆ ರಾಜೇಶ್ ಪತ್ನಿಯನ್ನು ಒತ್ತಾಯಿಸುತ್ತಿದ್ದ.
ಆದರೆ, ಇದಕ್ಕೆ ಆಕೆ ನಿರಾಕರಿಸಿದ್ದರು. ಗುರುವಾರ ರಾತ್ರಿಯೂ ಸಹ ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗಿತ್ತು. ಶುಕ್ರವಾರ ಬೆಳಗ್ಗೆ ಜಗಳ ಮುಂದುವರಿದಿತ್ತು. ಜಗಳ ವಿಕೋಪಕ್ಕೆ ತಿರುಗಿದಾಗ ರಾಜೇಶ್ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯನ್ನು ಇರಿದು ಹತ್ಯೆ ಮಾಡಿದ್ದಾನೆ.
ಮನೆಯಲ್ಲಿ ಜಗಳ ನಡೆಯುತ್ತಿದ್ದುದನ್ನು ಕಂಡ ನೆರೆಮನೆಯವರು ಹೋಗಿ ನೋಡಿದಾಗ ಶಾರದಾ ಹತ್ಯೆಯಾಗಿದ್ದು ತಿಳಿದುಬಂದಿದೆ. ತಕ್ಷಣ ಆರೋಪಿಯನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ದಂಪತಿಗೆ 12 ಹಾಗೂ 6 ವರ್ಷದ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂರು ವರ್ಷದ ಒಬ್ಬ ಪುತ್ರನಿದ್ದಾನೆ. ಬೇಸಿಗೆ ರಜೆ ನಿಮಿತ್ತ ಮಕ್ಕಳೆಲ್ಲ ಎಚ್.ಡಿ. ಕೋಟೆಯಲ್ಲಿರುವ ಅಜ್ಜಿ ಮನೆಗೆ ಹೋಗಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications