ಟಿಕೆಟ್ ಹಂಚಿಕೆ ಕೈ ಸುಡುತ್ತಿದೆ ಬಂಡಾಯ

ಕಾಂಗ್ರೆಸ್ ಅಂತಿಮ ಪಟ್ಟಿಯಲ್ಲಿ ಭದ್ರಾವತಿ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ಶಾಸಕ ಸಂಗಮೇಶ್ ಬೆಂಬಲಿಗರು ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಅವರಿಗೆ ಟಿಕೆಟ್ ನೀಡಿದ್ದರಿಂದ ಅವರು ಹೈ ಕಮಾಂಡ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಂಗಮೇಶ್ ಬೆಂಬಲಿಗನೊಬ್ಬ ಆತ್ಮಹತ್ಯೆಗೂ ಪ್ರಯತ್ನಿಸಿದ್ದು ಆತನನ್ನು ರಕ್ಷಿಸಲಾಗಿದೆ. ಪಕ್ಷದ ಟಿಕೆಟ್ ದೊರೆಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಸಂಗಮೇಶ್ ಘೋಷಿಸಿದ್ದಾರೆ. ಭದ್ರಾವತಿ ಕ್ಷೇತ್ರದ ಅಭ್ಯರ್ಥಿಯನ್ನು ಅಳೆದು ತೂಗಿ ಘೋಷಿಸಿದರೂ ಕಾಂಗ್ರೆಸ್ ಗೆ ಬಂಡಾಯದ ಬಿಸಿ ತಟ್ಟಿದೆ.
ಬಳ್ಳಾರಿಯಲ್ಲಿ ರಾಜೀನಾಮೆ ಬೆದರಿಕೆ : ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ವಂಚಿತ ದಿವಾಕರ ಬಾಬು ಬೆಂಬಲಿಗರು ತಮ್ಮ ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ದಿವಾಕರ ಬಾಬು ಅವರಿಗೆ ಟಿಕೆಟ್ ನೀಡದಿದ್ದರೆ, ಮಹಾನಗರ ಪಾಲಿಕೆಯ ಸದಸ್ಯರೆಲ್ಲರೂ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ಒಂಬತ್ತು ಜನ ಆಕಾಂಕ್ಷಿಗಳಿದ್ದ ಬಳ್ಳಾರಿ ನಗರ ಕ್ಷೇತ್ರದಲ್ಲಿ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಬಂಡಾಯ ಸ್ಪೋಟಗೊಂಡಿದೆ. ಬಂಡಾಯ ಅಭ್ಯರ್ಥಿಗಳಾಗಿಯೂ ಕೆಲವರು ಕಣಕ್ಕಿಳಿಯುವ ಸಾಧ್ಯತೆ ಇದೆ.
ಮಂಡ್ಯದಲ್ಲೂ ಕೈ ಸುಟ್ಟ ಬಂಡಾಯ : ರವೀಂದ್ರ ಶ್ರೀಕಂಠಯ್ಯ ಅವರನ್ನು ಕಣದಿಂದ ಹಿಂದೆ ಕರೆಸಿಕೊಂಡ ತಕ್ಷಣ ಮಂಡ್ಯ ಜಿಲ್ಲೆಯಲ್ಲಿ ಬಂಡಾಯ ಶಮನವಾಗುತ್ತದೆ ಎಂದು ಕಾಂಗ್ರೆಸ್ ಚಿಂತಿಸಿತ್ತು. ಆದರೆ, ಜಿಲ್ಲಾ ಕಾಂಗ್ರೆಸಿಗರು ಅಂಬರೀಶ್ ವಿರುದ್ಧ ಮತ್ತೆ ತಿರುಗಿ ಬಿದಿದ್ದಾರೆ.
ಅಂಬರೀಶ್ ಹೈ ಕಮಾಂಡ್ ನಾಯಕರಿಗೆ ಬ್ಲಾಕ್ ಮೇಲ್ ಮಾಡಿ ಟಿಕೆಟ್ ಪಡೆದಿದ್ದಾರೆ. ಹಣ ಕೊಟ್ಟು ಟಿಕೆಟ್ ಪಡೆದಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸತ್ಯಾನಂದ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ನಾವು ತಟಸ್ಥರಾಗಿ ಇರುತ್ತೇವೆ ಯಾವ ಅಭ್ಯರ್ಥಿಗಳ ಪರವಾಗಿಯೂ ಕಾರ್ಯನಿರ್ವಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಕೈ ಕಚೇರಿಗೆ ಕಲ್ಲು : ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ವಂಚಿತ ಅಂಜನಪ್ಪ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕ ಕೆಲಸ ಮಾಡಿದವರಿಗೆ ಟಿಕೆಟ್ ನೀಡಿಲ್ಲ ಅಂಜನಪ್ಪ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ವಾಗಿದೆ.
ಒಟ್ಟಾರೆ ಕಾಂಗ್ರೆಸ್ ಪಟ್ಟಿ ಅಂತಿಮಗೊಂಡಿದ್ದರೂ ಬಂಡಾಯ ಮಾತ್ರ ಕಡಿಮೆ ಆಗಿಲ್ಲ. ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದೆ. ಯಾರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ತಿಳಿಯಲಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications