ಸಂಗಮೇಶ್, ದಿವಾಕರ ಬಾಬು ಕೆಜೆಪಿಗೆ ?

ಕಗ್ಗಂಟಾಗಿದ್ದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಿದರೂ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯಗಾರರ ಸಮಸ್ಯೆ ತಪ್ಪಿಲ್ಲ. ಟಿಕೆಟ್ ವಂಚಿತರು ಕೆಜೆಪಿ ಮತ್ತು ಜೆಡಿಎಸ್ ನತ್ತ ಮುಖಮಾಡುತ್ತಿದ್ದಾರೆ.
ಕಾಂಗ್ರೆಸ್ ಅಂತಿಮ ಪಟ್ಟಿಯಲ್ಲಿ ಭದ್ರಾವತಿ ಕ್ಷೇತ್ರದಿಂದ ಸಿ.ಎಂ.ಇಬ್ರಾಹಿಂ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆ, ಹಾಲಿ ಶಾಸಕ ಸಂಗಮೇಶ್ ಸಿಡಿದೆದ್ದಿದ್ದಾರೆ. ಶಿವಮೊಗ್ಗದಲ್ಲಿ ಸೋಮವಾರ ರಾತ್ರಿಯೇ ಯಡಿಯೂರಪ್ಪ ಭೇಟಿ ಮಾಡಿದ ಅವರು ಕೆಜೆಪಿ ಸೇರುತ್ತಾರೆ ಎಂದು ತಿಳಿದುಬಂದಿದೆ.
ಭದ್ರಾವತಿಯಲ್ಲಿ ಪಕ್ಷಕ್ಕಿಂತ ವೈಯಕ್ತಿಕ ಪ್ರತಿಷ್ಠೆಗೆ ಹೆಚ್ಚು ಪ್ರಾದನ್ಯತೆ ದೊರೆಯಲಿದೆ. ಜೆಡಿಎಸ್ ನ ಅಪ್ಪಾಜಿಗೌಡ ಮತ್ತು ಕಾಂಗ್ರೆಸ್ ನ ಬಿ.ಕೆ.ಸಂಗಮೇಶ್ ನಡುವೆ ತೀವ್ರ ಪೈಪೋಟಿ ನಡೆಯುತ್ತದೆ. ಈ ಬಾರಿ ಕಾಂಗ್ರೆಸ್ ನಿಂದ ಸಿ.ಎಂ.ಇಬ್ರಾಹಿಂ ಕಣಕ್ಕೆ ಇಳಿದ್ದಾರೆ.
ಇದರಿಂದ ಸಂಗಮೇಶ್ ಕೆಜೆಪಿ ಸೇರಲು ಯತ್ನಿಸುತ್ತಿದ್ದಾರೆ. ಕೆಜೆಪಿ ಭದ್ರಾವತಿಯಲ್ಲಿ ಸಂಗಮೇಶ್ ಅಭ್ಯರ್ಥಿ ಎಂದು ಘೋಷಿಸಿದರೆ ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತವಾಗುತ್ತದೆ.
ದಿವಾಕರ ಬಾಬು ಕೆಜೆಪಿಗೆ : ಬಳ್ಳಾರಿನಗರದ ಒಂಬತ್ತು ಮಂದಿ ಟಿಕೆಟ್ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಿ ಕಾಂಗ್ರೆಸ್ ಅನಿಲ್ ಲಾಡ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಕೆ.ಸಿ ಕೊಂಡಯ್ಯ, ಪಂಪಾವತಿ, ದಿವಾಕರ್ ಬಾಬು, ಅಲ್ಲಂ ವೀರಭದ್ರಪ್ಪ ಮುಂತಾದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ.
ಸೋಮವಾರ ರಾತ್ರಿ ಟಿಕೆಟ್ ವಂಚಿತ ಮುಖಂಡರು ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚಿಸಿದ್ದಾರೆ. ಆದರೆ, ದಿವಾಕರ ಬಾಬು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕೆಜೆಪಿ ಯತ್ನಸುತ್ತಿದೆ. ಬಳ್ಳಾರಿಯ ಪ್ರಭಾವಿ ನಾಯಕ ದಿವಾಕರ ಬಾಬು ಕೆಜೆಪಿಗೆ ಬಂದರೆ ಪಕ್ಷದ ಬಲ ಹೆಚ್ಚಲಿಗೆ ಎಂಬುದು ಯಡಿಯೂರಪ್ಪ ಲೆಕ್ಕಾಚಾರ.
ಉಳಿದಂತೆ ಮದ್ದೂರು ಶಾಸಕಿ ಕಲ್ಪನಾ ಸಿದ್ದರಾಜು, ಮಾಜಿ ಮೇಯರ್ ಕೆ.ಚಂದ್ರಶೇಖರ್ ಹಾಗೂ ಶ್ರವಣಬೆಳಗೊಳ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ ಮುಂತಾದವರು ಕೆಜೆಪಿ ಸೇರುವ ಪಟ್ಟಿಯಲ್ಲಿದ್ದಾರೆ. ಇಂದು ಈ ಅಭ್ಯರ್ಥಿಗಳ ಅಂತಿಮ ನಿರ್ಧಾರ ಹೊರಬೀಳಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು ಕೆಜೆಪಿ ಸೇರಿದರೆ ಪಕ್ಷದ ಬಲ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications