ಪೆಟ್ರೋಲ್ ದರದಲ್ಲಿ ಮತ್ತೊಮ್ಮೆ ಇಳಿಕೆ
ನವದೆಹಲಿ, ಏ.15: ಪೆಟ್ರೋಲ್ ಬೆಲೆಯನ್ನು ಮತ್ತೊಮ್ಮೆ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಜೊತೆಗೆ ಡೀಸೆಲ್ ಬೆಲೆ ಮತ್ತಷ್ಟು ದುಬಾರಿ ಮಾಡುವ ಸೂಚನೆ ಸಿಕ್ಕಿದೆ. ಇಂಧನ ಸಂಸ್ಥೆಗಳ ಬೇಡಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದ್ದು, ಪೆಟ್ರೋಲ್ ಬೆಲೆ ಇಳಿಕೆ ಮಾಡಲಾಗಿದೆ ಸೋಮವಾರ(ಏ.15) ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಪೆಟ್ರೋಲ್ ಬೆಲೆಯಲ್ಲಿ 1.00ರು. ಕಡಿತಗೊಳಿಸಲಾಗಿದ್ದು, ಡೀಸೆಲ್ ಬೆಲೆ 40-50 ಪೈಸೆ ಏರಿಸುವ ಸಾಧ್ಯತೆಯಿದೆ. ಕಳೆದ ಏ.1ರಂದು ಪೆಟ್ರೋಲ್ ದರವನ್ನು 85 ಪೈಸೆ ಇಳಿಕೆ ಮಾಡಲಾಗಿತ್ತು ಹಾಗೂ ಮಾರ್ಚ್ 23ರಂದು ಡೀಸೆಲ್ ಬೆಲೆಯನ್ನು 45 ಪೈಸೆ ಏರಿಸಲಾಗಿತ್ತು. ಆದರೆ, ಸ್ಥಳೀಯ ತೆರಿಗೆಗಳನ್ನು ಹೊರತು ಪಡಿಸಿ ದರ ಇಳಿಕೆ ಮಾಡಲಾಗಿದೆ. ಹೀಗಾಗಿ ವಿವಿಧ ರಾಜ್ಯಗಳಲ್ಲಿ ದರ ಹೆಚ್ಚು ಕಮ್ಮಿಯಾಗಲಿದೆ.

ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ ಶೇ 3.05 ರಷ್ಟು ಇಳಿಕೆಯಾಗಿದ್ದು, ಪೆಟ್ರೋಲ್ ಬೇಡಿಕೆಯೂ ಕೂಡ ತಗ್ಗಿದೆ. ಹೀಗಾಗಿ ಭಾರತದಲ್ಲಿಯೂ ಪೆಟ್ರೋಲ್ ಬೆಲೆಯನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಬೆಲೆ ಏರಿಕೆ, ಇಳಿಕೆ ಬಗ್ಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳೊಂದಿಗೆ ಕೇಂದ್ರ ಸರ್ಕಾರ ಸೋಮವಾರ ಮಹತ್ವದ ಮಾತುಕತೆ ನಡೆಸಿ ಈ ನಿರ್ಧಾರ ಕೈಗೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 2.85 ಡಾಲರ್ ನಷ್ಟು ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ದರವನ್ನು ಇಳಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಒಪ್ಪಿಗೆ ಸೂಚಿಸಿದೆ.
* ದೆಹಲಿಯಲ್ಲಿ : 66.09 ರು(ಪ್ರತಿ ಲೀಟರ್ ಗೆ)
* ಕೋಲ್ಕತ್ತಾ: 73.48 ರು
* ಮುಂಬೈ : 72.88 ರು
* ಚೆನ್ನೈ: 69.08 ರು
* ಬೆಂಗಳೂರು : 72.94 ರು
ಡೀಸೆಲ್ ದರವನ್ನು ಪ್ರತಿ 2 ತಿಂಗಳಿಗೊಮ್ಮೆ ಪರಿಷ್ಕರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಅದರಂತೆ ಈ ಬಾರಿಯೂ ದರ ಏರಿಕೆ ಮಾಡಲು ನಿರ್ಧರಿಸಿದೆ. ಉಳಿದಂತೆ ಸಬ್ಸಿಡಿ ದರದ ಗೃಹ ಬಳಕೆ ಗ್ಯಾಸ್ ಮತ್ತು ಸೀಮೆಎಣ್ಣೆ ದರದಲ್ಲಿ ಸ್ಥಿರತೆ ಕಂಡುಬಂದಿದ್ದು, ಅವುಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಕಳೆದ ಆರ್ಥಿಕ ವರ್ಷದಲ್ಲಿ ಮಾರ್ಚ್ 31, 2013ಕ್ಕೆ ಅನುಗುಣವಾಗಿ ಇಂಧನ ಬೆಲೆ ಏರುಪೇರಿನಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೆಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲ್ ಸಂಸ್ಥೆ ಗಳು ಅನುಭವಿಸಿದ ಅಂದಾಜು ನಷ್ಟದ ಲೆಕ್ಕಾಚಾರ ಹಾಕಿದರೆ 1,60,000 ಕೋಟಿ ರು ದಾಟುತ್ತದೆ.
ಆಯಾ ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಭಿನ್ನವಾಗಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಯಲ್ಲಿ ಏರಿಳಿತ ಕಂಡುಬರುತ್ತದೆ. ಡಾಲರ್‌ಗೆ ಪ್ರತಿಯಾಗಿ ರುಪಾಯಿ ಮೌಲ್ಯ ಇನ್ನಷ್ಟು ಸ್ಥಿರಗೊಂಡಿದ್ದರೆ ಇಂಧನ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ.












Click it and Unblock the Notifications