ಬಿಜೆಪಿಯಿಂದ ಬೇಸತ್ತು ಸಿಧು ರಿಟೈರ್ಡ್ ಹರ್ಟ್

ಅಮೃತಸರದ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಜಯಸಿದ್ದ ಕೌರ್ ಅವರು ಪಂಜಾಬ್ ಅಸೆಂಬ್ಲಿಯಲ್ಲಿ ಬಿಜೆಪಿ ಶಾಸಕಿಯಾಗಿದ್ದಾರೆ. ಆದರೆ, ಪತಿ ಸಿಧು ಅವರಿಗೆ ಒದಗಿರುವ ದುಃಸ್ಥಿತಿ ಕಂಡು ತಮ್ಮ ದುಃಖವನ್ನು ಫೇಸ್ ಬುಕ್ ನಲ್ಲಿ ತೋಡಿಕೊಂಡಿದ್ದಾರೆ.
ಪತಿಯ ಮಾನ ಉಳಿಸುವ ಕಾಯಕ ಹೊತ್ತಿರುವ ಕೌರ್ ಅವರು ಈ ಹಿಂದೆ ಬಿಗ್ ಬಾಸ್ ಮನೆ ಹೊಕ್ಕಿದ್ದ ಸಿಧು ಅವರನ್ನು ಮನೆಯಿಂದ ಹೊರಗೆಳೆಯುವಲ್ಲಿ ಸಫಲರಾಗಿದ್ದರು. ಚುನಾವಣೆ ಪ್ರಚಾರಕ್ಕಾಗಿ ಸಿಧು ಅವರು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಯಿತು.
ಆದರೆ ಬಿಗ್ ಬಾಸ್ 6 ನಲ್ಲಿ ದಿನೇ ದಿನೇ ಪ್ರತಿಸ್ಪರ್ಧಿಗಳಿಂದ ಸಿಧು ಘನತೆ, ಗೌರವಕ್ಕೆ ಧಕ್ಕೆ ಉಂಟಾಗುತ್ತಿರುವುದನ್ನು ಕಂಡ ಪತ್ನಿ ಕೌರ್ ಅವರು ಬಿಜೆಪಿ ನಾಯಕರಿಗೆ ಪರಿಸ್ಥಿತಿ ವಿವರಿಸಿ, ಸಿಧು ಅವರನ್ನು ಹೊರ ತಂದಿದ್ದರು.
ಈಗ, ಕೌರ್ ಹೇಳಿಕೆ ನೀಡಿ, ಕಳೆದ ಆರು ತಿಂಗಳಿಂದ ಸಿಧು ಅವರನ್ನು ವ್ಯವಸ್ಥೆಯಿಂದ ದೂರವಿಡಲಾಗುತ್ತಿದೆ. ಅವರು ಅದಕ್ಕಾಗಿ ಕೆಲಸ ಮಾಡುತ್ತಿಲ್ಲ. ವ್ಯವಸ್ಥೆಯಡಿಯಲ್ಲಿ ನಮಗೆ ಜನರನ್ನು ಆಯ್ಕೆ ಮಾಡುವ ಅವಕಾಶವಿಲ್ಲದಾಗ ಉಸಿರುಗಟ್ಟಿದ ಭಾವನೆಯಾಗುತ್ತದೆ ಎಂದು ಹೇಳಿರುವ ಕೌರ್, ತಾನು ಯಾವುದೇ ರಾಜಕೀಯ ಪಕ್ಷವನ್ನು ಬೊಟ್ಟು ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅಮೃತಸರ ಸಂಸದ ಸಿಧು ಅವರು ಪಕ್ಷ ತನ್ನನ್ನು ದೂರವಿಡುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದಾರೆ. 2014ರ ಚುನಾವಣೆಗೆ ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ನವಜ್ಯೋತ್ ಸಿಂಗ್ ಸಿಧು ಅವರಿಗೆ ಅವಕಾಶ ನೀಡಿಲ್ಲ. ಭ್ರಷ್ಟಾಚಾರಿಗಳಿಗೆ ಬೆಂಬಲ ನೀಡುವಂತೆ ಸಿಧುಗೆ ಒತ್ತಡ ಹೇರಲಾಗುತ್ತಿದೆ ಎಂದು ಕೌರ್ ಬಹಿರಂಗಪಡಿಸಿದ್ದಾರೆ.
ಆದರೆ ಮೂಲಗಳ ಪ್ರಕಾರ ಸಿಧು ರಾಜಕೀಯದಿಂದ ದೂರ ಉಳಿದು ಕ್ರಿಕೆಟ್ ವೀಕ್ಷಕ ವಿವರಣೆಯತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಸಲಿಗೆ ರಾಹುಲ್ ಗಾಂಧಿ ಭಾಷಣಕ್ಕೆ ಪ್ರತಿಯಾಗಿ ಸಿಧು ನೀಡಿದ ಹೇಳಿಕೆ ಬಿಜೆಪಿ ನಾಯಕರಿಗೆ ಹಿಡಿಸದ ಕಾರಣ ಇಷ್ಟೆಲ್ಲ ರಾದ್ಧಾಂತ ಆಗಿದೆ ಎಂಬ ಸುದ್ದಿ ಸಿಕ್ಕಿದೆ.
ಪಂಜಾಬಿನಲ್ಲಿ 10 ಜನ ಯುವಕರಲ್ಲಿ 7 ಜನ ಮಾದಕ ವ್ಯಸನಿಗಳಾಗಿದ್ದಾರೆ. ನೀವು ದೇಶವನ್ನು ಮುನ್ನಡೆಸಬೇಕಾಗಿದೆ. ರಾಜಕೀಯಕ್ಕೆ ಇಳಿದು ನಿಮ್ಮ ಕೌಶಲ್ಯ ಪ್ರದರ್ಶನ ಮಾಡಿ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದಕ್ಕೆ ಪೂರಕವಾಗಿ ಸಿಧು ಮಾತನಾಡಿ, ಪಂಜಾಬಿನಲ್ಲಿ ಶೇ 60 ರಿಂದ 70 ರಷ್ಟು ಯುವಕರು ಡ್ರಗ್ಸ್ ಚಟಕ್ಕೆ ಬಿದ್ದಿರುವುದು ನಿಜ. ಇದು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ವರದಿಯಾಗಿದೆ ಎಂದಿದ್ದರು. ಇದು ಪಂಜಾಬಿನಲ್ಲಿ ಕೋಲಾಹಲ ಎಬ್ಬಿಸಿತ್ತು. ಬಿಜೆಪಿಗೆ ಸಿಧು ಕಂಡರೆ ಕೋಪ ಉಕ್ಕುವಂತೆ ಮಾಡಿತ್ತು. ಸದ್ಯಕ್ಕೆ ಪತ್ನಿ ನೀಡಿರುವ ಹೇಳಿಕೆಗೆ ಸಿಧು ಪ್ರತಿಕ್ರಿಯೆ ನೀಡಿಲ್ಲ. ಐಪಿಎಲ್ 6 ನಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications