ಖಾಸಗಿ ಬಸ್ ದುರಂತ, ಆರು ಮಂದಿ ದುರ್ಮರಣ

ಬೆಂಗಳೂರಿನಿಂದ ಮದನಪಲ್ಲಿಗೆ ತೆರಳುತ್ತಿದ್ದ ಬೆಂಗಳೂರು ಟ್ರಾನ್ಸ್ ಪೋರ್ಟ್ ಎಂಬ ಬಸ್ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಜೋಡಿಕೊಪ್ಪಪಲ್ಲಿ ಕ್ರಾಸ್ ಎಂಬಲ್ಲಿ ಉರುಳಿಬಿದ್ದಿದೆ. ಬುಧವಾರ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಚಾಲಕನ ವಿಪರೀತ ವೇಗವೇ ಘಟನೆಗೆ ಕಾರಣ ಎನ್ನಲಾಗಿದೆ.
ಯುಗಾದಿ ಆಚರಣೆಗಾಗಿ ಬೆಂಗಳೂರಿನಿಂದ ಹಬ್ಬಕ್ಕೆ ಬೇಕಾದ ವಸ್ತು ಖರೀದಿ ಮಾಡಿ ಮದನಪಲ್ಲಿಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಮೃತಪಟ್ಟವರನ್ನು ಆಂಧ್ರಪ್ರದೇಶ ವಾಯಲುಪಾಡು ಮೂಲದ ಚಿಂತಾಮಣಿ ಕರ್ನಾಟಕ ಬ್ಯಾಂಕ್ ಉದ್ಯೋಗಿ ಮಧು, ಕೊಕ್ಕಂಟಿಯ ಅಜಯ್, ಶ್ರೀನಿವಾಸಪುರದ ತಾಡಗೋಳು ಗ್ರಾಮದ ದೊಡ್ಡರೆಡ್ಡಪ್ಪ, ಕೋಲಾರದ ಬಸ್ ಕಂಡಕ್ಟರ್ ವಾಜೀದ್‌ಖಾನ್, ಚಿಂತಾಮಣಿ ತಾಲೂಕಿನ ಊಳುವಾಡಿಯ ನಾಗರಾಜ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಹೆಸರು, ವಿಳಾಸ ಪತ್ತೆಯಾಗಿಲ್ಲ.
20ಕ್ಕೂ ಹೆಚ್ಚು ಗಾಯಾಳುಗಳನ್ನು ಶ್ರೀನಿವಾಸಪುರ ಸಾರ್ವಜನಿಕರ ಆಸ್ಪತ್ರೆಗೆ ಸೇರಿಸಲಾಗಿದೆ. ಬಸ್ಸಿನ ಮೇಲೆ ಸುಮಾರು 50ಕ್ಕೂ ಹೆಚ್ಚು ಮಂದಿ ಕುಳಿತಿದ್ದರು. ಬಸ್ಸಿನ ಮುಂಬಾಗದ ಬಾಗಿಲ ಬಳಿ ನಿಂತಿದ್ದ ನಾಲ್ಕೈದು ಪ್ರಯಾಣಿಕರು ಬಸ್ ಪಲ್ಟಿಯಾಗುತ್ತಿದ್ದಂತೆ ಸಮೀಪದ ಹುಣಸೆ ಮರಕ್ಕೆ ಸಿಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್ಸಿನ ಮೇಲೆ ಕುಳಿತಿದ್ದವರು ಭಯದಿಂದ ಜಿಗಿದಾಗ ಬಸ್ಸಿನಡಿ ಸಿಲುಕಿದ್ದು ಕೆಲವರು ಸತ್ತಿರಬಹುದೆಂದು ಶಂಕಿಸಲಾಗಿದೆ.
ಚಾಲಕನು ಬಸ್ಸನ್ನು ವೇಗವಾಗಿ ಚಲಾಯಿಸುತ್ತಿದ್ದ ಜೋಡಿಕೊಪ್ಪಪಲ್ಲಿ ಕ್ರಾಸ್ ಬಳಿ ಇರುವ ತಿರುವಿನಲ್ಲಿ ಬಸ್ಸನ್ನು ತಿರುಗಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಉರುಳಿ ಬಿತ್ತು ಎಂದು ತಿಳಿದು ಬಂದಿದೆ.
ಬಸ್ಸಿನಲ್ಲಿ ಸುಮಾರು 40 ಮಂದಿ ಪ್ರಯಾಣಿಕರಿದ್ದು, ಬಸ್ಸಿನ ಕಂಡಕ್ಟರ್ ಸೇರಿದಂತೆ 6 ಮಂದಿ ಸ್ಥಳದಲ್ಲೇ ಮೃತ ಪಟ್ಟರೆ 3 ಜನರ ಸ್ಥಿತಿ ಚಿಂತಾಜನಕವಾಗಿದೆ ಹಾಗೂ 25 ಮಂದಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಕೋಲಾರದ ಆರ್ಎಲ್ ಜಾಲಪ್ಪ ಆಸ್ಪತ್ರೆಗೆ ಹಾಗೂ ಶ್ರೀನಿವಾಸ ಪುರ ರಾಯಲ್ ಪಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಿನವರು ತೀವ್ರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮನಿವಾಸೆ ಸಾಪಟ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಕಾರಿ ಭಗವಾನ್ ದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications