ಶಾಂತಿನಗರ : ಜೆಡಿಎಸ್ ಅಭ್ಯರ್ಥಿ ಸಂಬಂಧಿ ಕೊಲೆ

ಸೋಮವಾರ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ಆನೆಪಾಳ್ಯದಲ್ಲಿ ಪ್ರಚಾರ ನಡೆಸುತ್ತಿದ್ದ ಕೆ.ಲೋಕೇಶ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಮೃತ ಲೋಕೇಶ್ ಜೊತೆಗಿದ್ದ ಶಂಕರ್ ಎನ್ನುವವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಮಲ್ಯ ಆಸ್ಪತ್ರಗೆ ದಾಖಲಿಸಲಾಗಿದೆ.
ಇದು ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಎಂದು ಮೃತ ಲೋಕೇಶ್ ನ ಸ್ನೇಹಿತರು ಆರೋಪಿಸಿದ್ದಾರೆ. ಕೊಲೆಯಾದ ದುರ್ದೈವಿ ಲೋಕೇಶ್ ಶಾಂತಿ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಉಪ ಮೇಯರ್ ವಾಸುದೇವಮೂರ್ತಿ ಅವರ ಚಿಕ್ಕಪ್ಪನ ಮಗ.
ನಡೆದಿದ್ದೇನು : ರಾತ್ರಿ ಸುಮಾರು 10.4ರ ಸುಮಾರಿಗೆ ವಾಸುದೇವಮೂರ್ತಿ ಸೇರಿದಂತೆ ಸುಮಾರು 10 ಮಂದಿ ಆನೆಪಾಳ್ಯದಲ್ಲಿ ಪ್ರಚಾರ ನಡೆಸುತ್ತಾ ಒಂದು ಕ್ರಾಸ್ ನಿಂದ ಮತ್ತೊಂದು ಕ್ರಾಸ್ ಗೆ ತೆರಳಿದ್ದಾರೆ. ಮೃತ ಲೋಕೇಶ್ ಮತ್ತು ಗಾಯಾಳು ಶಂಕರ್ ಮೋರಿಯ ಮೇಲೆ ವಿಶ್ರಾಂತಿ ಪಡೆಯಲು ಕುಳಿತಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕರ ಗುಂಪು ಇವರ ಮೇಲೆ ಹಲ್ಲೆ ಮಾಡಿದೆ. ಲೋಕೇಶ್ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತೀವ್ರ ರಕ್ತ ಸ್ರಾವದಿಂದಾಗಿ ಲೋಕೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಶಾಂತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. (ಶಾಂತಿ ನಗರ ಕ್ಷೇತ್ರ ಪರಿಚಯ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications