ಚುನಾವಣಾ ರಣಕಹಳೆ ಊದಿದ ಬಿಜೆಪಿ

ಯೋಜನೆಯಂತೆ ಸೋಮವಾರ ಬಹಿರಂಗ ಚುನಾವಣಾ ಪ್ರಚಾರ ಕಾರ್ಯವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಉದ್ಘಾಟಿಸಬೇಕಾಗಿತ್ತು. ಆದರೆ, ವಿಮಾನದ ತಾಂತ್ರಿಕ ದೋಷದಿಂದಾಗಿ ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ಅಗಮಿಸಲು ಸಾಧ್ಯವಾಗಲಿಲ್ಲ.
ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡರು ರಾಜ್ಯದ ಮತ್ತು ಕೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಗ್ಗೆ ಯಾರು ಆರೋಪ ಮಾಡದಿರುವುದು ಕಾರ್ಯಕರ್ತರನ್ನು ಬೆರಗುಗೊಳ್ಳುವಂತೆ ಮಾಡಿತು.
ಸಮಾವೇಶ ಉದ್ಘಾಟಿಸಿ ಮಾತಿಗೆ ನಿಂತ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ನಾಯಕರು ಟಿಕೆಟ್ ಮಾರಿಕೊಳ್ಳುವ ಹಂತಕ್ಕೆ ಬಂದಿದ್ದಾರೆ. ಅವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಟಿಕೆಟ್ ಹಂಚಿಕೆಗಾಗಿ ದೆಹಲಿಯಲ್ಲಿ ನಾಯಕರ ಮನೆ ಬಾಗಿಲು ಕಾಯುವು ಪಕ್ಷದವರು ರಾಜ್ಯದ ಆಡಳಿತ ನಿರ್ವಹಿಸಲಾರರು ಎಂದು ವ್ಯಂಗ್ಯವಾಡಿದರು.
ರಾಜ್ಯದ ಪ್ರತಿ ಗ್ರಾಮವನ್ನು ಅಭಿವೃದ್ಧಿ ಮಾಡಿರುವ ಬಿಜೆಪಿ ಸರ್ಕಾರಕ್ಕೆ ಜನ ಬೆಂಬಲ ಒದಗಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಪ್ರಹ್ಲಾದ್ ಜೋಶಿ ಈ ಸಂದರ್ಭದಲ್ಲಿ ಕರೆ ನೀಡಿದರು. ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಜನರು ಬೆಲೆ ಏರಿಕೆಯ ಬಿಸಿ ಅನುಭವಿಸಬೇಕಾಗಿದೆ ಎಂದು ಜೋಶಿ ಆರೋಪಿಸಿದರು.
ಕಾಂಗ್ರೆಸ್ ಏನೆಂದು ಮತ ಕೇಳುತ್ತದೆ : ಸಮಾವೇಶದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ಪಕ್ಷ ಏನೆಂದು ಜನರ ಬಳಿ ಮತ ಕೇಳುತ್ತದೆ ಎಂದು ಈಶ್ವರಪ್ಪ ಪ್ರಶ್ನಿಸಿದರು. ಗೋ ಹತ್ಯೆ ನಿಷೇಧ ಕಾನೂನು ವಿರೋಧಿಸುವ ಕಾಂಗ್ರೆಸ್, ಹಸುಗಳನ್ನು ಕೊಲ್ಲುತ್ತೇವೆ ಮತ ನೀಡಿ ಎಂದು ಮಾತ್ರ ಕೇಳಬೇಕು ಎಂದು ಅವರು ವಾಗ್ದಾಳಿ ನಡೆಸಿದರು.
ವಿಕಾಸವೇ ಗುರಿ : ಸಮಾವೇಶದಲ್ಲಿ ಬಿಜೆಪಿಯ ಚುನಾವಣಾ ಘೋಷವಾಕ್ಯ ವಿಕಾಸವೇ ಗುರಿ ಬಿಜೆಪಿಯೇ ದಾರಿಯನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಡುಗಡೆ ಮಾಡಿದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಡಿ.ವಿ.ಸದಾನಂದಗೌಡ ಮುಂತಾದವರು ಹಾಜರಿದ್ದರು.
ಸಾಲು -ಸಾಲು ಗೈರು : ವಿಮಾನದ ತಾಂತ್ರಿಕ ದೋಷದಿಂದಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಸಮಾವೇಶಕ್ಕೆ ಗೈರು ಹಾಜರಾಗಿ ರಾಜ್ಯ ನಾಯಕರಿಗೆ ಮುಜುಗರ ತಂದರು. ಕೃಷಿ ಸಚಿವ ಉಮೇಶ್ ಕತ್ತಿ, ವಸತಿ ಸಚಿವ ವಿ.ಸೋಮಣ್ಣ, ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿ ಸಮಾವೇಶಕ್ಕೆ ಗೈರು ಹಾಜರಾಗಿದ್ದರು.
ಸಚಿವರಾದ ಮುರುಗೇಶ್ ನಿರಾಣಿ, ಸಿ.ಟಿ.ರವಿ, ಸುರೇಶ್ ಕುಮಾರ್, ಗೋವಿಂದ ಕಾರಜೋಳ, ರವೀಂದ್ರ ನಾಥ್, ವಿಶ್ವೇಶ್ವರ ಹೆಗಡೆ ಕಾಗೇರಿ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications