ಅರಮನೆ ಮೈದಾನದಲ್ಲಿ ಇಂದು ಕೇಸರಿ ಕಲರವ

ನಗರದ ಅರಮನೆ ಆವರಣದ ಕೃಷ್ಣವಿಹಾರ ಸಭಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಹಿರಿಯ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಮುಂತಾದವರು ಭಾಗವಹಿಸಲಿದ್ದಾರೆ.
ಮೂರು ಸಾವಿರ ವಾಹನಗಳು : ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಲು ರಾಜ್ಯದ ವಿವಿಧ ಮೂಲೆಗಳಿಂದ ಕಾರ್ಯಕರ್ತರು ಆಗಮಿಸುವುದರಿಂದ ಸುಮಾರು 3 ಸಾವಿರ ವಾಹನಗಳು ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ವಾಹನ ಸಂಚಾರದ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
ಸಮಾವೇಶಕ್ಕೆ ಹೀಗೆ ಹೋಗಿ : ಹೊರ ಜಿಲ್ಲೆಗಳಿಂದ ಆಗಮಿಸುವ ವಾಹನಗಳು ರಿಂಗ್ ರೋಡ್ ಮೂಲಕ ಹೆಬ್ಬಾಳ ಮೇಲ್ಸೆತುವೆ ಮೂಲಕ ಅರಮನೆ ಮೈದಾನ ತಲುಪಬಹುದು.
ಗಣ್ಯರ ವಾಹನಗಳಿಗೆ ಕುಮಾರಕೃಪಾ ರಸ್ತೆ, ಮೇಕ್ರಿ ವೃತ್ತದ ಮೂಲಕ ಅರಮೆನೆ ಮೈದಾನ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯ ವರೆಗೂ ಸಂಚಾರ ದಟ್ಟಣೆ ಉಂಟಾಗುವ ಸಂಭವವಿದೆ. ಆದ್ದರಿಂದ ಸಾರ್ವಜನಿಕರು ಅರಮೆನೆ ಮೈದಾನದ ಕಡೆ ಸಾಗುವ ಕೆಲಸಗಳಿದ್ದರೆ ಕೊಂಚ ಪರದಾಡಬೇಕಾಗೀತು.
ಸಮಾವೇಶದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಬಿ.ಎಸ್.ಲೋಕೇಶ್ ಕುಮಾರ್ ಹೇಳಿದ್ದಾರೆ. ಸಮಾವೇಶದ ಭದ್ರತೆಗಾಗಿ ಸುಮಾರು 600 ಪೊಲೀಸರನ್ನು ನಿಯೋಜಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications