ಶಿವಲೀಲೆ: 27 ಕೋಟಿ ರೂ ಗಿಟ್ಟಿಸಿದ ಬ್ಯಾಂಕ್ ಉದ್ಯೋಗಿ
ಬೆಂಗಳೂರು, ಏ.6: ಹಣೆಯ ಬರಹ ಅಂದರೆ ಇದೇನೇನೋ!? ಮೊನ್ನೆ ಜೈಪುರದಲ್ಲಿ ಕಾಂಚನ್ ಸಿಂಗ್ ಎಂಬ ಫೋಟೋಗ್ರಾಫರ್ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ಹೋಗಿ ಸ್ವತಃ ತಾನೂ ಸೇರಿದಂತೆ ಕುಟುಂಬದ ಐದೂ ಮಂದಿಯ ಜೀವಗಳನ್ನು ಶಿವಾರ್ಪಣಮಸ್ತು ಅಂದಿದ್ದಾನೆ.
ಆದರೆ ಇಲ್ಲೊಬ್ಬ ಬ್ಯಾಂಕ್ ಮ್ಯಾನೇಜರ್ ಇರೋ ಉದ್ಯೋಗ ಬಿಟ್ಟು ಶಿವನ ಬಗ್ಗೆ ಬರೆದು ಬರೋಬ್ಬರಿ 27 ಕೋಟಿ ರೂಪಾಯಿಯನ್ನು ತಮ್ಮ ಖಾತೆಗೆ ಜಮಾಯಿಸಿಕೊಳ್ಳುವ ಮೂಲಕ ಶಿವನ ಕೃಪೆಗೆ ಪಾತ್ರರಾಗಿದ್ದಾರೆ.

ಇದು ಭಾರತದ ಸಾಹಿತ್ಯ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದಿರುವ ಅದ್ಭುತ ಎಂದೇ ಹೇಳಬಹುದು. ಅಮೀಶ್ ತ್ರಿಪಾಠಿ ಎಂಬಾತ ಸಾಧಾರಣ ಬ್ಯಾಂಕ್ ಉದ್ಯೋಗಿಯಾಗಿದ್ದರು. ಜನನ 1974ರಲ್ಲಿ, IIM (Kolkata)-ದಲ್ಲಿ ಶಿಕ್ಷಣ. ಆದರೆ ಅದ್ಯಾವ ಘಳಿಗೆಯಲ್ಲಿ ಶಿವನ ಮೆಚ್ಚುಗೆಗೆ ಪಾತ್ರರಾದರೋ ಪಟ್ಟಾಂಗ ಹಾಕಿಕೊಂಡು ಕುಳಿತವರೇ ಶಿವನ ಲೀಲೆಗಳ ಬಗ್ಗೆ ಬರೆದಿದ್ದೇ ಬರೆದಿದ್ದು. ಅದರಿಂದ ಅದ್ಭುತವಾದ ಕೃತಿಯೊಂದು ಹೊರಹೊಮ್ಮಿದೆ.
ಕಳೆದ ಎರಡು ವರ್ಷಗಳಲ್ಲಿ ಆ ಕೃತಿಯ 10 ಲಕ್ಷ ಪ್ರತಿಗಳು ಮಾರಾಟವಾಗಿದ್ದು ಆತನಿಗೆ 22 ಕೋಟಿ ರೂಪಾಯಿ ಗಳಿಸಿಕೊಟ್ಟಿದೆ. ಈ ಅದೇ ರೀತಿ ಮತ್ತೊಂದು ಪುಸ್ತಕ ಬರೆದುಕೊಡಿ ಎಂದು ಪ್ರಕಾಶಕರೊಬ್ಬರು ಗಂಟುಬಿದ್ದಿದ್ದು, 5 ಕೋಟಿ ರೂ. ಮುಂಗಡವನ್ನೂ ಅಮೀಶ್ ತ್ರಿಪಾಠಿ ಅವರ ಕೈಗಿತ್ತಿದ್ದಾರೆ. ಇದು ಪ್ರಕಾಶಕರೊಬ್ಬರು ಭಾರತೀಯ ಲೇಖಕರೊಬ್ಬರಿಗೆ ನೀಡಿರುವ ಗರಿಷ್ಠ ಅಡ್ವಾನ್ಸ್ ಮೊತ್ತವಾಗಿದೆ. ಶಿವ ಶಿವಾ!
ಅಮೀಶ್ ತ್ರಿಪಾಠಿ ಅವರ ಖಜಾನೆ ಗಳಿಕೆಯ The Immortals of Meluha ಎಂಬ ಚೊಚ್ಚಲ ಕೃತಿಯ ಮಹತ್ವವನ್ನು ಅರಿಯದೇ ಸುಮಾರು 20 ಪ್ರಕಾಶಕರು ಆರಂಭದಲ್ಲಿ ಆ ಪುಸ್ತಕ ಬೇಡವೇ ಬೇಡ ಅನ್ನುತ್ತಾರೆ. ಕೊನೆಗೂ ಅಮೀಶ್ ಅವರ ಗೆಳೆಯರೊಬ್ಬರು 2010 ಫೆಬ್ರವರಿಯಲ್ಲಿ ಪುಸ್ತಕವನ್ನು ಕೊನೆಗೂ ಪ್ರಕಟಿಸಿಯೇ ಬಿಟ್ಟರು. ಅದಕ್ಕೆ ಪೂರಕವಾಗಿ ಅಮೀಶ್ ಸಹ ಆಧುನಿಕ ಮಾಹಿತಿ ತಂತ್ರಜ್ಞಾನದ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಓದುಗರನ್ನು ತಲುಪುವಲ್ಲಿ ಯಶಶ್ವಿಯಾದರು.
ನಂತರ ಅಮೀಶ್ ತ್ರಿಪಾಠಿ ಹಿಂದಿರುಗಿ ನೋಡಲೇ ಇಲ್ಲ. ಮೊದಲು ಬ್ಯಾಂಕ್ ಕೆಲಸಕ್ಕೆ ಗುಡ್ ಬೈ ಕೇಳಿದರು. ನಂತರ Secret of Nagas ಪುಸ್ತಕ ಗೀಚಿದರು. ಅದೂ ಸಕ್ಸಸ್ ಆಯ್ತು. ಮುಂದೆ The Oath of Vayuputras ಎಂಬ ಮೂರನೇ ಪುಸ್ತಕ ಬರೆದು ಮುಗಿಸಿದರು. ಆ ಪುಸ್ತಕವೂ ಕಡ್ಲೆ ಪುರಿಯಂತೆ ಖರ್ಚಾಯಿತು.
ಹೀಗಿರುವಾಗಲೇ Westland Publisher ಸಂಸ್ಥೆಯವರು ಅಮೀಶ್ ತ್ರಿಪಾಠಿ ಅವರ ಮುಂದೆ ಪದ್ಮಾಸನ ಹಾಕಿಕೊಂಡು ಕುಳಿತೇ ಬಿಟ್ಟರು. ಜತೆಗೆ, ತಂದಿದ್ದ 5 ಕೋಟಿ ರೂ. ಗಂಟನ್ನು ಅವರ ಕೈಯಲ್ಲಿ ಮಡಗಿ, ದೇವ್ರು ಮುಂದಿನ ಪುಸ್ತಕವನ್ನು ನೀವು ನಮಗೇ ಬರೆದುಕೊಡಬೇಕು ಅಂದರು. ಮೇಲಿಂದ ಶಿವ ತಥಾಸ್ತು ಅಂದಿರಬೇಕು, ಅಮೀಶ್ ತ್ರಿಪಾಠಿ ಮುಂದಿನ ಪುಸ್ತಕ ಬರೆಯಲು ಕುಳಿತುಬಿಟ್ಟಿದ್ದಾರೆ.












Click it and Unblock the Notifications