ಬಿಎಸ್‌ವೈ ಹಿಟ್ ಲಿಸ್ಟ್ ರೆಡಿ: ಆತಂಕದಲ್ಲಿ ಬಿಜೆಪಿ ಶಾಸಕರು
ಬೆಂಗಳೂರು, ಮಾರ್ಚ್ 30: ರಾಜಕೀಯವಾಗಿ ತಮ್ಮನ್ನು ದುಃಸ್ಥಿತಿಗೆ ತಳ್ಳಲು ಕೈಜೋಡಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಮಾಜಿ ಬಿಜೆಪಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಧಾನಸಭೆ ಚುನಾವಣೆಯನ್ನು ವೇದಿಕೆಯಾಗಿಸಿಕೊಂಡಿದ್ದಾರೆ.
ಅರ್ಥಾತ್ ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ನೆರವಾದ ಶಾಸಕ/ಸಚಿವರನ್ನು ಚುನಾವಣೆಯಲ್ಲಿ ಸೋಲಿಸಲು ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಬತ್ತಳಿಕೆಯಲ್ಲಿರುವ ಅಷ್ಟೂ ಅಸ್ತ್ರಗಳನ್ನು ಪ್ರಯೋಗಿಸಲು ನಿರ್ಧರಿಸಿದ್ದಾರೆ.
ಕರ್ನಾಟಕದ ರಾಜಕೀಯ ಹಗೆತನದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜತೆ ಸಮಾನಾಂತರವಾಗಿ ಸಾಗುವ ಬಿಎಸ್‌ವೈ, ತಮ್ಮ ವಿರೋಧಿಗಳನ್ನು ಚುನಾವಣೆಯಲ್ಲಿ ಹೊಡೆದುರುಳಿಸಲು ಮುಂದಾಗಿದ್ದಾರೆ. ಇದೇ ವೇಳೆ ತಮ್ಮ ದುಷ್ಮನ್ ಗಳಾದ ಅನಂತಕುಮಾರ್ ಮತ್ತು ಈಶ್ವರಪ್ಪ ಅವರನ್ನೂ ರಾಜಕೀಯವಾಗಿ ಮುಗಿಸಲು ಪಣ ತೊಟ್ಟಿದ್ದಾರೆ ಯಜಮಾನ್ ಯಡಿಯೂರಪ್ಪನವರು. ತಾವು ಜೈಲಿಗೆ ಹೋಗಲು ಇವರಿಬ್ಬರ ಪಾತ್ರ ಪ್ರಮುಖ ಎಂಬುದು ಅವರ ಬಲವಾದ ಅನಿಸಿಕೆ.
ಯಡಿಯೂರಪ್ಪನವರ ಸೇಡು ಇಷ್ಟಕ್ಕೇ ಸುಮ್ಮನಾಗುವಂತಹುದಲ್ಲ. ಬಿಜೆಪಿಯಿಂದ ತಮ್ಮನ್ನು ಹೊರ ಹಾಕಲು ಕೈಜೋಡಿಸಿದವರು ಹಾಗೂ ತಮ್ಮ ವಿರುದ್ಧ ಕಟು ಟೀಕೆ ಮಾಡಿದವರ ವಿರುದ್ಧವೂ ಸೇಡು ತೀರಿಸಿಕೊಳ್ಳಲು ಅವರು ಇನ್ನೂ 18 ಮಂದಿಯ ಪಟ್ಟಿ ಮಾಡಿದ್ದಾರೆ ಎಂಬ ಮಾಹಿತಿಯೂ ಇದೆ.
ಹಿಟ್ ಲಿಸ್ಟ್ ಯಡಿಯೂರಪ್ಪನವರ ಬುದ್ಧಿಗೆ ತಕ್ಕಂತೆ ಹನುಮಂತನ ಬಾಲದಂತೆ ಉದ್ದವಾಗಿಯೇ ಇದೆ. ಅದಕ್ಕೆ ಕೊನೆ-ಮೊದಲು ಇಲ್ಲ. ಸದ್ಯದ ಚುನಾವಣೆಯಲ್ಲಿ ಜಾತಿ ಮತ್ತು ಹಣ ಬಲದಿಂದ ಇವರನ್ನು ಸೋಲಿಸುವುದು ಯಡಿಯೂರಪ್ಪನವರ ಒನ್ ಪಾಯಿಂಟ್ ಪ್ರೋಗ್ರಾಂ ಆಗಿದೆ.
ಯಡಿಯೂರಪ್ಪ ಹಿಟ್ ಲಿಸ್ಟ್ ನಲ್ಲಿರುವ ಆ 20 ಮಂದಿಯ ಪರಿಚಯ ಹೀಗಿದೆ:

ಬಗಲ್ ಮೆ ದುಷ್ಮನ್ ಈಶ್ವರಪ್ಪ:
ಬಗಲ್ ಮೆ ದುಷ್ಮನ್ ಎಂಬಂತೆ ತನ್ನ ಜತೆ ಅನ್ಯೋನ್ಯವಾಗಿರುವಂತೆ ವರ್ತಿಸುತ್ತಾ ಕೊನೆಗೆ ತಾನೇ ಮನೆಯಿಂದ ಆಚೆ ಹೋಗುವಂತೆ ಮಾಡಿದ ಶ್ರೇಯಸ್ಸು ಈಶುದು ಎಂಬುದು ಯಡಿಯೂರಪ್ಪನವರ ಮನದಾಳದ ಅಳಲು. ಶಿವಮೊಗ್ಗದ ಗಲ್ಲಿಗಲ್ಲಿಗಳಲ್ಲಿ ತಮ್ಮ ಜೋಡಿಯಾಗಿ ಪಾರುಪತ್ಯ ಮೆರೆದರೂ ಈಶು ಕೊನೆಗೆ ತಮಗೇ ಮುಳುಗುನೀರು ತಂದರು ಎಂದು ಯಡಿಯೂರಪ್ಪ ನಿಶ್ಚಯಿಸಿಯಾಗಿದೆ. ಹಾಗಾಗಿ ಈಶ್ವರಪ್ಪನವರನ್ನು ಹಾಲಿ ಚುನಾವಣೆಯಲ್ಲಿ ಮೊದಲು ಶಿವಮೊಗ್ಗದಲ್ಲಿ ಸೋಲಿಸಿ ಬುದ್ಧಿ ಕಲಿಸುವುದು ಯಡಿಯೂರಪ್ಪ ಅವರ ಟಾರ್ಗೆಟ್.

ಅನಂತ ದುಷ್ಮನಿಗೆ ಇನ್ನೂ ಟೈಮಿದೆ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರನ್ನು ಸೋಲಿಸಿ, ಸೇಡು ತೀರಿಸಿಕೊಳ್ಳುವುದು ಅದಕ್ಕೂ ಮುಂಚೆ ಅವರದೇ ಪಟಾಲಂನಿಂದ ಬಂದ ಹುಬ್ಬಳ್ಳಿ ಗ್ಯಾಂಗ್ ಗೆ ಈಗಿನ ಚುನಾವಣೆಯಲ್ಲೇ ಮಣ್ಣುಮುಕ್ಕಿಸುವ ತುಡಿತ ಯಡಿಯೂರಪ್ಪ ಅವರದು.

ಪಟ್ಟಿಯಲ್ಲಿ ಸದಾನಂದ ಗೌಡರೂ:
ಹಿಟ್ ಲಿಸ್ಟ್‌ನಲ್ಲಿ ಮೂರನೆಯವರಾಗಿ ಕಾಣಿಸಿಕೊಳ್ಳುವುದೇ ಮಾಜಿ ಸಿಎಂ ಸದಾನಂದ ಗೌಡ. ಇವರಿಬ್ಬರ ದುಷ್ಮನಿ ಇಡೀ ಜಗತ್ತಿಗೆ ತಿಳಿದಿರುವಂತಹುದು. ಸದ್ಯಕ್ಕೆ ಗೌಡರು ಚುನಾವಣೆಗೆ ನಿಲ್ಲುವ ಸಾಧ್ಯತೆ ಇಲ್ಲ. ಸದ್ಯ ಮೇಲ್ಮನೆ ಸದಸ್ಯರಾದ ಗೌಡರು, 2014ರ ಮಧ್ಯದಲ್ಲಿ ನಿವೃತ್ತರಾಗಲಿದ್ದಾರೆ. ಅದೇ ವರ್ಷ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಗೌಡರಿಗೆ ಅನಿವಾರ್ಯವಾಗಬಹುದು. ಆ ಸಂದರ್ಭದಲ್ಲಿ ಗೌಡರನ್ನು ಹಣಿದರೆ ಸಾಕಾದೀತು ಎಂಬುದು ಯಡಿಯೂರಪ್ಪ ಲೆಕ್ಕಾಚಾರ.

ಶೋಭಾ ದುಷ್ಮನ್ ಸುರೇಶ್ ಕುಮಾರ್:
ಆಯಾಚಿತವಾಗಿ ಯಡಿಯೂರಪ್ಪ ಹಿಟ್ ಲಿಸ್ಟ್‌ನಲ್ಲಿ ಕಾಣಿಸಿಕೊಳ್ಳುವವರು ರಾರಾಜಿನಗರದ ಸುರೇಶ್ ಕುಮಾರ್. ತಮ್ಮಮ ಬಗ್ಗೆ ಗೌರವವಿರಿಸಿಕೊಂಡಿದ್ದರೂ ಸಕಾಲದಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬುದು ಸುರೇಶ್ ಮೇಲೆ ಯಡಿಯೂರಪ್ಪ ಹೊರಿಸಬಹುದಾದ ಆರೋಪ. ಜತೆಗೆ, ಶೋಭಾ ಕರಂದ್ಲಾಜೆಯೂ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಕ್ಷೇತ್ರದಲ್ಲಿ ಶೋಭಾಗೆ ಇರುಸುಮುರುಸು ತರುತ್ತಿದ್ದಾರೆ ಎಂಬುದು ಸುರೇಶ್ ವಿರುದ್ಧದ ಕೋಪಕ್ಕೆ ತುಪ್ಪ ಸುರಿದಿದೆ.

ಅಶೋಕ್ ಮಹಾರಾಜ್:
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಬೆಂಗಳೂರಿನಲ್ಲಿ ಅವರ ಪ್ರಭಾವವನ್ನು ಕ್ಷೀಣಿಸುವಂತೆ ಮಾಡಿದ ಶ್ರೇಯಸ್ಸು ಅಶೋಕ ಮಹಾರಾಜನಿಗೆ ಸಲ್ಲುತ್ತದೆ ಎಂಬುದು ಯಡಿಯೂರಪ್ಪ ಆಪ್ತರ ಬಲವಾದ ಅನಿಸಿಕೆ.

ಸೊಗಡು ಶಿವಣ್ಣ:
ಸುಖಾಸುಮ್ಮನೆ ತಮ್ಮ ವಿರುದ್ಧ ಸಮರ ಸಾರಿ ಶಿವಣ್ಣ ಅವರನ್ನು ಸೊಗಡುರಹಿರರನ್ನಾಗಿಸುವುದು ಯಡಿಯೂರಪ್ಪ ಧ್ಯೇಯೋದ್ದೇಶವಾಗಿದೆ. ತುಮಕೂರಿನಲ್ಲಿ ಬಾಯಿಗೆ ಬಂದಂತೆ ಬಯ್ದಾಡುತ್ತಾ ತಮ್ಮ ಮಾನ ಹರಾಜಿಗೆ ಹಾಕಿದರು ಎಂಬುದು ಶಿವಣ್ಣ ಮೇಲಿರುವ ಗುರುತರ ಆರೋಪ.

ಮೈಸೂರು ರಾಮದಾಸ್:
ಮೈಸೂರು ಜಿಲ್ಲಾ ಸಚಿವೆಯಾಗಿ ಶೋಭಾ ಕರಂದ್ಲಾಜೆ ಮೆರೆಯುತ್ತಿದ್ದ ಕಾಲಕ್ಕೆ ತಮ್ಮ ಪಟಾಲಂನಲ್ಲಿ ಕಾಣಿಸಿಕೊಂಡ ರಾಮದಾಸ ತಮಗೆ ದಾಸನಾಗಿ ಉಳಿಯಲಿಲ್ಲ. ಸಕಲ ನೆರವು ನೀಡಿದ ತಮ್ಮನ್ನೇ ತುಳಿದು ಏಣಿಯೇರಿದರು ಎಂಬುದು ಯಡಿಯೂರಪ್ಪ ನೋವು.

ಯಲಹಂಕ ವಿಶ್ವನಾಥ್:
ರಾಜಕೀಯ ಗುರುವಾಗಿ ತಾವು ಬೆಳೆಸಿದ ಹುಡುಗ ಕೊನೆಗೆ ಗುರುವಿಗೇ ತಿರುಮಂತ್ರ ಹೇಳಿದ ಎಂಬ ನೋವು ವಿಶ್ವನಾಥ್ ಬಗ್ಗೆ ಯಡಿಯೂರಪ್ಪಗೆ ಬಹುವಾಗಿದೆ. ಇಬ್ಬರ ಮಧ್ಯೆ ಹಣಕಾಸು ವ್ಯವಹಾರವೂ ಸಾಕಷ್ಟಿತ್ತು. ಎರಡೂ ಮನೆಗಳವರೂ ಅನ್ಯೋನ್ಯವಾಗಿದ್ದರು. ಹೀಗಿದ್ದ ವಿಶ್ವನಾಥ ಹೇಗಾಗಿಬಿಟ್ಟ ಎಂಬುದು ಯಡಿಯೂರಪ್ಪನವರನ್ನು ಬಹುವಾಗಿ ಕಾಡುತ್ತಿದೆ. ಹಾಗಾಗಿಯೇ ವಿಶ್ವನಾಥರನ್ನು ಸೋಲಿಸಿ, ಸೇಡು ತೀಡಿಕೊಳ್ಳಲು ಯಡಿಯೂರಪ್ಪ ನಿಶ್ಚಯಿಸಿದ್ದಾರೆ.

ತುಮಕೂರು ಸುರೇಶ್ ಗೌಡ:
ಡಿಟ್ಟೋ ಯಲಹಂಕ ವಿಶ್ವನಾಥ್.

ಚಿಕ್ಕಮಗಳೂರಿನ ಸಿಟಿ ರವಿ:
ಯಲಹಂಕ ವಿಶ್ವನಾಥ್, ತುಮಕೂರು ಸುರೇಶ್ ಗೌಡ ಸಾಲಿನಲ್ಲಿ ಮೂರನೆಯವರಾಗಿ ಕಾಣಿಸಿಕೊಳ್ಳುವವರೇ ಸಿಟಿ ರವಿ.

ಸಕಾಲದಲ್ಲಿ ಕೈಹಿಡಿಯದ ಕತ್ತಿ:
ಬಿಜೆಪಿಯಲ್ಲೇ ಉಳಿಯುವ ಮೂಲಕ ಕತ್ತಿ ಬೆಳಗಾವಿ ಪ್ರಾಂತ್ಯದಲ್ಲಿ ತಮ್ಮನ್ನು ಅಕ್ಷರಶಃ ನಿತ್ರಾಣಗೊಳಿಸಿಬಿಟ್ಟರು ಎಂಬುದು ಯಡಿಯೂರಪ್ಪ ಮನದಾಳದ ನೋವು.

ಶಂಕರಲಿಂಗೇ ಗೌಡ:
ಜೆಡಿಎಸ್ ಸೇರಿರುವ ಮೈಸೂರಿನ ಎಚ್ಎಸ್ ಶಂಕರಲಿಂಗೇ ಗೌಡ ಬಿಎಸ್‌ವೈ ಟಾರ್ಗೆಟ್ ಪಟ್ಟಿಯಲ್ಲಿದ್ದಾರೆ. ತಮ್ಮ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿದ್ದಾರೆ ಎಂದು ಶಂಕರಲಿಂಗೇ ಗೌಡರ ವಿರುದ್ಧವೂ ಕೆಂಗೆಣ್ಣು ಬೀರಿದ್ದಾರೆ ಯಡಿಯೂರಪ್ಪ.

ಪಟ್ಟಿಯಲ್ಲಿ ಉಳಿಯುವ ಇನ್ನೂ 8 ಪ್ಲಸ್ ಮಂದಿ:
ನಂದೀಶ್ ರೆಡ್ಡಿ, ಕಳಕಪ್ಪ ಬಂಡಿ, ಬಾಲಚಂದ್ರ ಜಾರಕಿಹೊಳಿ, ಗೋವಿಂದ ಕಾರಜೋಳ, ಅಪ್ಪಚ್ಚು ರಂಜನ್, ಸಿದ್ದು ಸವದಿ, ರಾಮಣ್ಣ ಎಸ್.ಲಮಾಣಿ ಎಸ್ ಕೆ ಬೆಳ್ಳುಬ್ಬಿ ಮತ್ತು ಬ್ಲೂ ಬಾಯ್ಸ್ ಲಕ್ಷ್ಮಣ ಸವದಿ, ಸಿಸಿ ಪಾಟೀಲ್. ಅಧಿಕಾರದಲ್ಲಿದ್ದಾಗ ತಮ್ಮ ಜತೆಗಿದ್ದು ನಂತರ ವಿರೋಧಿ ಗುಂಪಿಗೆ ನೆಗೆದಿರುವ ಶಾಸಕರ ಇವರು. ಇವರಲ್ಲಿ ಯಾರೇ ಬಿಜೆಪಿಯಲ್ಲಿ ಉಳಿಯಲಿ ಅಥವಾ ಬೇರೆ ಪಕ್ಷವನ್ನೇ ಸೇರಲಿ ಚುನಾವಣೆಯಲ್ಲಿ ಅವರನ್ನು ಸೋಲಿಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎನ್ನುತ್ತಿವೆ ಕೆಜೆಪಿ ಮೂಲಗಳು.
ಯಡಿಯೂರಪ್ಪನವರಿಗೆ ಆಲ್ ದಿ ಬೆಸ್ಟ್ ಹೇಳಬೇಕಾ !?












Click it and Unblock the Notifications