ಕಾಂಗ್ರೆಸ್ ಪಟ್ಟಿ ನೋಡಿ ಸೋನಿಯಾ ಕೆಂಡಾಮಂಡಲ

ಇಂದು ಬೆಳಗ್ಗೆ ಸೋನಿಯಾಗಾಂಧಿ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಜ್ಯ ನಾಯಕರು ತಯಾರಿಸಿರುವ ಪಟ್ಟಿ ನೋಡಿ ಸೋನಿಯಾ ಗಾಂಧಿ ಕೋಪಗೊಂಡಿದ್ದಾರೆ. ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ನಾಯಕರು ನೀಡಿದ ನೂರು ಅಭ್ಯರ್ಥಿಗಳ ಪಟ್ಟಿಯಲ್ಲಿ ತೆರದಾಳ ಕ್ಷೇತ್ರದ ಅಭ್ಯರ್ಥಿಯಾಗಿ ನಟಿ ಉಮಾಶ್ರೀ ಅವರ ಹೆಸರು ಮಾತ್ರವಿತ್ತು ಎಂದು ತಿಳಿದು ಬಂದಿದೆ.
ಇದರಿಂದ ಮತ್ತಷ್ಟು ಕೋಪಗೊಂಡ ಸೋನಿಯಾ ರಾಜ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಲು ಮಹಿಳೆಯರಿಲ್ಲವೇ? ಎಂದು ರಾಜ್ಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿಯೊಂದು ಜಿಲ್ಲೆಗೆ ಒಬ್ಬ ಮಹಿಳೆಯಂತೆ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ತಾಕೀತು ಮಾಡಿದ್ದಾರೆ. ಇದರಿಂದ ಮುಜುಗರಕ್ಕೊಳಗಾದ ರಾಜ್ಯ ನಾಯಕರು ಪಟ್ಟಿಯನ್ನು ಹಿಂಪಡೆದು, ತಿದ್ದುಪಡಿ ಮಾಡಿ ಮಾ.30ರಂದು ನೀಡುವುದಾಗಿ ಸಭೆಯಿಂದ ಹೊರಬಂದಿದ್ದಾರೆ.
ಆದ್ದರಿಂದ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಮಾ.30ಕ್ಕೆ ಮುಂದೂಡಲಾಗಿದೆ. ಸೋನಿಯಾ ಆದೇಶದಿಂದ ಕಂಗಾಲಾಗಿರುವ ರಾಜ್ಯ ನಾಯಕರು ಪ್ರತಿ ಜಿಲ್ಲೆಗೆ ಒಬ್ಬ ಮಹಿಳೆಯರಿಗೆ ಟಿಕೆಟ್ ನೀಡಿದರೆ, ಪಕ್ಷದಲ್ಲಿ ಅಸಮಾಧಾನ ಉಂಟಾಗಲಿದೆ ಅದನ್ನು ಬಗೆಹರಿಸುವುದು ಹೇಗೆ ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಸೋನಿಯಾ ಆದೇಶದಿಂದಾಗಿ ಪಟ್ಟಿ ಬಿಡುಗಡೆ ಆಡುವುದು ಮತ್ತಷ್ಟು ತಡವಾಗಲಿದೆ ಎಂದು ತಿಳಿದು ಬಂದಿದೆ.
ಶೀತಲ ಸಮರ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವಿನ ಸಮರ ತಾರಕ್ಕೇರಿದೆ. ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂಬ ಉಭಯ ನಾಯಕರ ಜಗಳದಿಂದಾಗಿ ಪಟ್ಟಿ ಅಂತಿಮವಾಗಲು ತಡವಾಗುತ್ತಿದೆ.
ಮೂಲ ಕಾಂಗ್ರೆಸಿಗರಿಗೆ ಆದ್ಯತೆ, ನಾಯಕರ ಮಕ್ಕಳಿಗೆ ಟಿಕೆಟ್ ಹಂಚಿಕೆ, ಜಾತಿ ಲೆಕ್ಕಾಚಾರಗಳು ಮುಂತಾದ ವಿಚಾರಗಳು ಎದುರಾದಾಗ ಉಭಯ ನಾಯಕರು ಒಮ್ಮತದ ನಿರ್ಣಯಕ್ಕೆ ಬರಲು ವಿಫಲರಾಗಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ ಒಮ್ಮೆ ನಾಯಕರು ಏಕ ವಚನದಲ್ಲೂ ಜಗಳವಾಡುವ ಮಟ್ಟಕ್ಕೆ ತೆರಳಿದ್ದರು ಎಂದು ಪಕ್ಷದ ಮೂಲಗಳು ಹೇಳಿವೆ.
ರಾಜ್ಯದ ಆಡಳಿತ ವಿರೋಧಿ ಅಲೆ ಉಪಯೋಗಿಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿದೆ. ಆದ್ದರಿಂದ ಸಹಜವಾಗಿಯೇ ಆಂಕಾಕ್ಷಿಗಳ ಪಟ್ಟಿ ಹೆಚ್ಚಾಗಿದೆ. ಉಭಯ ನಾಯಕರ ಬೆಂಬಲಿಗರು ಟಿಕೆಟ್ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದ್ದರಿಂದ ಸಿದ್ದು ಮತ್ತು ಪರಮೇಶ್ವರ್ ನಡುವೆ ಮುನಿಸು ಪ್ರಾರಂಭವಾಗಿದೆ.
ಆದರೆ, ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ನಾಯಕರು ನಮ್ಮ ನಡುವೆ ಭಿನ್ನಮತವಿಲ್ಲ ಒಗ್ಗಟ್ಟಾಗಿದ್ದೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೂ ಪಟ್ಟಿ ಅಂತಿಮಗೊಳಿಸುವುದು ಏಕೆ ಕಗ್ಗಂಟಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications