ಬಿಬಿಎಂಪಿ ಸದಸ್ಯರಿಗೆ ಶಾಸಕರಾಗೋ ಉತ್ಸಾಹ

ಪ್ರಸ್ತುತ ಬಿಬಿಎಂಪಿಯ ಎರಡು ವರ್ಷಗಳ ಅಧಿಕಾರ ಬಾಕಿ ಇದೆ. ಆಗಲೇ ಸುಮಾರು 20ಕ್ಕೂ ಹೆಚ್ಚು ಬಿಬಿಎಂಪಿ ಸದಸ್ಯರು ಶಾಸಕರಾಗಲು ಬಯಸಿ ಟಿಕೆಟ್ ಗಾಗಿ ಪ್ರಯತ್ನ ನಡೆಸಿದ್ದಾರೆ. ಹಾಲಿ ಮೇಯರ್ ಡಿ.ವೆಂಕಟೇಶ್ ಮೂರ್ತಿ, ಉಪ ಮೇಯರ್ ಎಲ್ .ಶ್ರೀನಿವಾಸ್, ಮಾಜಿ ಮೇಯರ್ ಎಸ್.ಕೆ.ನಟರಾಜ್ ಸೇರಿದಂತೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನ ಪುರಪಿತೃಗಳು ಶಾಸಕರಾಗುವ ಉತ್ಸಾಹದಲ್ಲಿದ್ದಾರೆ.
ತಾವು ಪ್ರತಿನಿಧಿಸುವ ಕ್ಷೇತ್ರ ಅಥವ ಬೇರೆ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವಂತೆ ಬಿಬಿಎಂಪಿ ಸದಸ್ಯರು ಪಕ್ಷದ ನಾಯಕರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಹಾಲಿ ಟಿಕೆಟ್ ಹಂಚಿಕೆ ಬಗ್ಗೆ ತಲೆ ಕೆಡಿಸಿಕೊಂಡಿರುವ ಪಕ್ಷಗಳಿಗೆ ಪುರಪಿತೃಗಳು ಹೊಸ ಸಮಸ್ಯೆಯಾಗಿ ಪರಿಣಮಿಸಿದ್ದಾರೆ.
ಹಾಲಿ ಮೇಯರ್ ವೆಂಕಟೇಶ್ ಮೂರ್ತಿ ಗೋವಿಂದರಾಜನಗರ ಕ್ಷೇತ್ರದಿಂದ, ಬಿಬಿಎಂಪಿ ಸದಸ್ಯ ಬಿ.ವಿ,ಗಣೇಶ್ ಚಾಮರಾಜಪೇಟೆ ಕ್ಷೇತ್ರದಿಂದ, ಎಸ್.ಕೆ.ನಟರಾಜ್ ಯಶವಂತಪುರ ಕ್ಷೇತ್ರದಿಂದ, ರವೀಂದ್ರ ವಿಜಯನಗರ ಕ್ಷೇತ್ರದಿಂದ ಟಿಕೆಟ್ ಬಯಸಿ ಪಕ್ಷದ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಕಾಂಗ್ರೆಸ್ ನ ಎಂ.ನಾಗರಾಜು ಮಹಾಲಕ್ಷ್ಮೀ ಲೇಜೌಟ್ ನಿಂದ, ಕೆ.ಚಂದ್ರಶೇಖರ್ ಬಸವನಗುಡಿಯಿಂದ, ಸಂಪತ್ ರಾಜ್ ಪುಲಿಕೇಶಿ ನಗರದಿಂದ, ಬೈರತಿ ಸುರೇಶ್ ಕೆ.ಆರ್.ಪುರಂ ಕ್ಷೇತ್ರದಿಂದ, ಟಿ.ಮಲ್ಲೇಶ್ ಗಾಂಧಿನಗರ ಕ್ಷೇತ್ರದಿಂದ ಶಾಸಕರಾಗಲು ಕೋರಿ ನಾಯಕರಿಗೆ ಮನವಿ ಮಾಡಿದ್ದಾರೆ.
ಜೆಡಿಎಸ್ ನ ಪದ್ಮನಾಭ ರೆಡ್ಡಿ ಸರ್ವಜ್ಞನಗರದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಟಿಕೆಟ್ ಸಿಗುವುದು ಬಹುತೇಕ ಖಾತ್ರಿಯಾಗಿದೆ ಎಂಬ ಮಾತುಗಳು ಬಿಬಿಎಂಪಿ ವಲಯದಲ್ಲಿ ಕೇಳಿ ಬರುತ್ತಿವೆ. ಒಟ್ಟಾರೆ ವಿವಿಧ ಪಕ್ಷಗಳಿಂದ 20ಕ್ಕೂ ಹೆಚ್ಚು ಬಿಬಿಎಂಪಿ ಸದಸ್ಯರು ಶಾಸಕರಾಗಲು ತಯಾರಿ ನಡೆಸಿದ್ದು, ಯಾರಿಗೆ ಟಿಕೆಟ್ ದೊರೆಯಲಿದೆ ಎನ್ನುವುದು ಖಚಿತವಾಗಿಲ್ಲ.
ಬೆಂಗಳೂರಿನ ಹಾಲಿ ಮೇಯರ್ ಡಿ.ವೆಂಕಟೇಶಮೂರ್ತಿ ಮತ್ತು ಹಾಗೂ ಉಪಮೇಯರ್ ಎಲ್.ಶ್ರೀನಿವಾಸ್ ಅವರ ಒಂದು ವರ್ಷದ ಅವಧಿ ಏಪ್ರಿಲ್ 26ಕ್ಕೆ ಕೊನೆಗೊಳ್ಳಲಿದೆ. ನಂತರ ಇವರ ಸ್ಥಾನಗಳಿಗೆ ಹೊಸಬರು ಬರುವುದು ಖಂಡಿತ. ಆದ್ದರಿಂದ ಇವರು ಶಾಸಕರಾಗಲು ಬಯಸಿರಬಹುದು. ಆದರೆ, ಎರಡು ವರ್ಷದ ಅಧಿಕಾರ ಬಾಕಿ ಇರುವಾಗಲೇ ಬಿಬಿಎಂಪಿ ಸದಸ್ಯರಿಗೆ ಶಾಸಕರಾಗುವ ತರಾತುರಿ ಏನು ಎಂದು ತಿಳಿದಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications