ಪ್ರಹ್ಲಾದ ಜೋಶಿ ಒಂದು ಕುನ್ನಿ: ಯಡಿಯೂರಪ್ಪ

ಕೃಷ್ಣರಾಜ ಕ್ಷೇತ್ರ ಕೆಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಿನ್ನೆ-ಮೊನ್ನೆಯಷ್ಟೇ ರಾಜಕೀಯಕ್ಕೆ ಬಂದ ಜೋಶಿಯನ್ನು ಸಂಸದರನ್ನಾಗಿ ಮಾಡಿದ ಈ ಯಡಿಯೂರಪ್ಪರನ್ನು ಟೀಕಿಸುವ ಯಾವುದೇ ನೈತಿಕತೆ ಜೋಷಿಗಿಲ್ಲ. ಅನಂತ ಕುಮಾರ್ ಮುಳುಗುತ್ತಿರುವ ಹಡಗಿನಂತಿರುವ ಬಿಜೆಪಿಗೆ ಬಕ್ರಾನನ್ನು ಹುಡುಕಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಬಿಎಸ್‌ವೈ ವ್ಯಂಗ್ಯವಾಡಿದ್ದಾರೆ.
ಯಾರೊಂದಿಗೂ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದ ಯಡಿಯೂರಪ್ಪ, ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇ ನಾವು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಸಹಿತ ಎಲ್ಲ ವರ್ಗಗಳಿಗೂ ಅವಕಾಶ ಕಲ್ಪಿಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಎದುರಾಳಿ ಅಭ್ಯರ್ಥಿಗಳು ಯಾರು ಎಂದೂ ಕಾದು ನೋಡದೆ ಮಾರ್ಚ್ ತಿಂಗಳ ಅಂತ್ಯಕ್ಕೆ ಕೆಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿ ಮುಳುಗುವ ಹಡಗು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿನ ಹಿನ್ನೆಲೆ ಈಶ್ವರಪ್ಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಂದೆ ಅಧ್ಯಕ್ಷರಾಗಲು ಯಾರೂ ಬಯಸಲಿಲ್ಲ. ಈ ವಿಚಾರದಲ್ಲಿ ಬುದ್ಧಿವಂತಿಕೆ ತೋರಿದ ಅನಂತ ಕುಮಾರ್ ತಾವು ಹೊಣೆ ಹೊರದೆ ಮುಳುಗುವ ಹಡಗಿನ ನಾಯಕತ್ವವನ್ನು ಪ್ರಹ್ಲಾದ್ ಜೋಶಿಗೆ ಕೊಡಿಸಿದ್ದಾರೆ. ಆದರೆ ಜೋಷಿ ನೇಮಕ ನಂತರವೂ ಅನೇಕರು ಬಿಜೆಪಿ ಬಿಟ್ಟು ಕೆಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದರು.
ಯಡಿಯೂರಪ್ಪ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂಬ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಈಶ್ವರಪ್ಪಗೆ ಬೇರೆಯವರೊಂದಿಗೆ ಕೈ ಜೋಡಿಸಿ ಮನೆ ಹಾಳು ಮಾಡುವ ಕೆಲಸ ಗೊತ್ತೆಂದು ಆಕ್ರೋಶ ವ್ಯಕ್ತಡಿಸಿದರು. ತಮ್ಮ ಬೆನ್ನಿಗೆ ಚೂರಿ ಹಾಕಿದವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಆಗ ಈಶ್ವರಪ್ಪ ಬಂಡವಾಳ ಬಯಲಾಗಲಿದೆ ಎಂದು ಭವಿಷ್ಯ ನುಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications