ಪೊಲೀಸ್ ಮೇಲೆ ಹಲ್ಲೆ, ಐವರು ಶಾಸಕರು ಅಮಾನತು

ಈ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ಧನ್ ಪಾಟೀಲ್ ಮಂಡಿಸಿದ ನಿರ್ಣಯಕ್ಕೆ ಸದನವು ಧ್ವನಿಮತದಿಂದ ಅಂಗೀಕರಿಸಿದೆ. ರಾಮ್ ಕದಮ್ (ಎಂಎನ್‌ಎಸ್), ಜಯಕುಮಾರ್ ರಾವಲ್ (ಬಿಜೆಪಿ), ಕ್ಷಿತಿಜ್ ಠಾಕೂರ್ (ಬಹುಜನ ವಿಕಾಸ್ ಆಘಾಡಿ), ರಾಜನ್ ಸಾಳ್ವಿ (ಶಿವಸೇನೆ) ಮತ್ತು ಪ್ರದೀಪ್ ಜೈಸ್ವಾಲ್ (ಪಕ್ಷೇತರ) ಅಮಾನತುಗೊಂಡ ಶಾಸಕರು. ಸದನದಲ್ಲಿ ಅಮಾನತನ್ನು ಘೋಷಿಸಿದ ಪಾಟೀಲ್, "ಶಾಸಕರ ಕೃತ್ಯ ಗಂಭೀರವಾಗಿವೆ ಹಾಗೂ ಶ್ರೇಷ್ಠ ಸದನದ ಘನತೆಯನ್ನು ತಗ್ಗಿಸುವಂತಹದಾಗಿವೆ" ಎಂದರು.
2013 ಡಿಸೆಂಬರ್ 31ರವರೆಗಿನ ಅಮಾನತಿನ ಅವಧಿಯಲ್ಲಿ ಈ ಶಾಸಕರು ಸದನದ ಕಲಾಪಗಳಲ್ಲಿ ಭಾಗವಹಿಸುವಂತಿಲ್ಲ ಮಾತ್ರವಲ್ಲ, ಮುಂಬೈ ಮತ್ತು ನಾಗಪುರಗಳಲ್ಲಿರುವ ಶಾಸಕಾಂಗದ ಆವರಣದೊಳಗೆ ಪ್ರವೇಶಿಸುವಂತಿಲ್ಲ. ವರ್ಲಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಸೂರ್ಯವಂಶಿಗೆ ವಿಧಾನಭವನದ ಸಂದರ್ಶಕರ ಗ್ಯಾಲರಿಯ ಹೊರಗಡೆ ಶಾಸಕರ ತಂಡ ಹಲ್ಲೆ ನಡೆಸಿತ್ತು. ಪೊಲೀಸ್ ಅಧಿಕಾರಿ ಕೆಲವು "ಪ್ರಚೋದನಾತ್ಮಕ" ಸಂಜ್ಞೆಗಳನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ.
ಬಹುಜನ ವಿಕಾಸ ಅಗದಿ ಶಾಸಕ ಕ್ಷಿತಿಜ್ ಠಾಕೂರ್‌ನ ಕಾರನ್ನು ಸೂರ್ಯವಂಶಿ ಸೋಮವಾರ ಬಾಂದ್ರಾ-ವರ್ಲಿ ಕಡಲು ರಸ್ತೆಯಲ್ಲಿ ನಿಲ್ಲಿಸಿ ವೇಗದ ಚಾಲನೆಗಾಗಿ ದಂಡ ವಿಧಿಸಿದ್ದರು. ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸುವುದಕ್ಕಾಗಿ ಠಾಕೂರ್ ಆ ವೇಳೆ ಪ್ರಯಾಣಿಸುತ್ತಿದ್ದರು.ತಮ್ಮ ಕೃತ್ಯವನ್ನು ಶಾಸಕರು ಸಮರ್ಥಿಸಿಕೊಂಡಿದ್ದಾರೆ.
ಹೊಡೆದಾಟ ಆರಂಭಿಸಿದ್ದು ಪೊಲೀಸ್ ಅಧಿಕಾರಿಯೇ ಎಂದು ಹೇಳಿರುವ ಶಾಸಕರು, ಕದಮ್‌ರನ್ನು ಸೂರ್ಯವಂಶಿ ದೂಡಿ ಕೆಳಗೆ ಬೀಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಲ್ಲೆಯ ಬಳಿಕ ಪೊಲೀಸ್ ಅಧಿಕಾರಿಯನ್ನು ಸ್ಟ್ರೆಚರ್‌ನಲ್ಲಿ ಹೊರಗೆ ಸಾಗಿಸಲಾಯಿತು. ಸೂರ್ಯವಂಶಿಯೊಂದಿಗೆ ಕ್ಷಮೆ ಕೋರಲು ಕ್ಷಿತಿಜ್ ಠಾಕೂರ್ ನಿರಾಕರಿಸಿದ್ದಾರೆ.
ಕೃತ್ಯವನ್ನು ಖಂಡಿಸಿರುವ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಇದು ಖಂಡನೀಯ ಎಂದಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಇಂಥ ಘಟನೆ ಹಿಂದೆಂದೂ ನಡೆದಿಲ್ಲ ಎಂದು ಹೇಳಿರುವ ಅವರು, ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ.












Click it and Unblock the Notifications