ಶೆಟ್ಟರ್ ಸ್ವ ಕ್ಷೇತ್ರದಲ್ಲಿ ಮರು ಚುನಾವಣೆಗೆ ಆಗ್ರಹ

ಮಾ.7ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 33 ಸ್ಥಾನಗಳನ್ನು ಪಡೆದಿತ್ತು. ಸಿಎಂ ತವರು ಕ್ಷೇತ್ರವಾದ ವಾರ್ಡ್ ನಂ 31ರಲ್ಲಿ ಬಿಜೆಪಿ ಅಭ್ಯರ್ಥಿ ಆದರ್ಶ ಮಹೇಶ ಉಪ್ಪಿನ್ ಜಯಗಳಿಸಿದ್ದರು. ಈ ಗೆಲುವಿನ ಹಿಂದೆ ಅಕ್ರಮ ನಡೆದಿದೆ ಎಂದು ಸೋತ ಅಭ್ಯರ್ಥಿಗಳು ದೂರಿದ್ದಾರೆ.
ನಗರದಲ್ಲಿ ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಸತ್ಯಶೋಧನಾ ಸಮಿತಿ ಅಧ್ಯಕ್ಷ ಅರವಿಂದ ಮೇಟಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 31ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿನ ಹಿಂದೆ ಷಡ್ಯಂತ್ರ ಅಡಗಿದೆ. 31ನೇ ವಾರ್ಡ್‌ಗೆ ಮರು ಮತದಾನ ನಡೆಸುವಂತೆ ಜಿಲ್ಲಾಧಿಕಾರಿಗೆ ಈಗಾಗಲೇ ಎರಡು ಬಾರಿ ಮನವಿ ಮಾಡಿದ್ದೇವೆ ಎಂದರು.
ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಮಾ.11ರಂದು ನಡೆಯಿತು, 31ನೇ ವಾರ್ಡ್‌ಗೆ ಸಂಬಂಧಪಟ್ಟ ಮತಪೆಟ್ಟಿಗೆಗಳ 12 ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಒಂದಕ್ಕೆ ಮಾತ್ರ ಸಹಿ ಮಾಡಲಾಗಿತ್ತು. ಉಳಿದ 11 ಯಂತ್ರಗಳಿಗೆ ಸಹಿ (ಇವಿಎಂ) ಮಾಡಿರಲಿಲ್ಲ. ಅವಧಿಗೂ ಮೊದಲೇ ಈ ಕ್ಷೇತ್ರದ ಮತ ಎಣಿಕೆ ಮಾಡಿರುವ ಶಂಕೆ ಇದೆ.
ಮತ ಎಣಿಕೆ ವೇಳೆ ಇವಿಎಂ ಕಾಣೆಯಾಗಿರುವ ಬಗ್ಗೆ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದೆವು. ಆದರೆ, ಪಾಲಿಕೆ ಆಯುಕ್ತರು ಹಾಗೂ ತಹಸೀಲ್ದಾರ್ ಮತ ಎಣಿಕೆಯನ್ನು ಸ್ಥಗಿತಗೊಳಿಸುವುದು ಅಸಾಧ್ಯ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಎಂದು ಮತ ಎಣಿಕೆ ಮುಂದುವರೆಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿದರು. ಜೆಡಿಎಸ್ ಅಭ್ಯರ್ಥಿ ಬಾಪನಗೌಡ ರಾಯನಗೌಡ, ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ರಾಜೀವ ಇನಾಮದಾರ, ಕೆಜೆಪಿ ಅಭ್ಯರ್ಥಿ ಫಕ್ಕೀರಪ್ಪ ತಟ್ಟಿಮನಿ ಮುಂತಾದವರು ಒಗ್ಗಟ್ಟಾಗಿ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಮುಂದಾಗಿದ್ದೇವೆ ಎಂದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ಪ್ರಭಾವ ಬಳಸಿ ಮುಂಚಿತವಾಗಿ ಮತ ಎಣಿಕೆ ಮಾಡಿಸಿದ್ದಾರೆ. ಚುನಾವಣಾ ಅಕ್ರಮವೂ ನಡೆದಿರುವ ಸಾಧ್ಯತೆ ಇದೆ. ಎರಡು ದಿನದಲ್ಲಿ ಈ ಬಗ್ಗೆ ಸೋತ ಅಭ್ಯರ್ಥಿಗಳೆಲ್ಲರೂ ಹೈಕೋರ್ಟ್ ನಲ್ಲಿ ಒಟ್ಟಾಗಿ ದೂರು ನೀಡುತ್ತೇವೆ. ವಾರ್ಡ್ ನಲ್ಲಿ ಮರು ಮತದಾನ ನಡೆಸಬೇಕು ಹಾಗೂ ಅಕ್ರಮದಲ್ಲಿ ಮತಗಟ್ಟೆ ಅಧಿಕಾರಿಗಳು ಭಾಗಿಯಾಗಿರುವುದು ಸಾಬೀತಾದರೆ ಅವರಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications