ತೇಜಸ್ವಿನಿ ಸ್ಪರ್ಧೆಗೆ ಕಾರ್ಯಕರ್ತರ ವಿರೋಧ

ಆದರೆ, ರಾಜ್ಯದಲ್ಲಿ ಟಿಕೆಟ್ ಆಂಕಾಕ್ಷಿಗಳ ಪರ, ವಿರೋಧ ಅಭ್ಯರ್ಥಿಗಳು ರಾಜ್ಯ ನಾಯಕರನ್ನು ಭೇಟಿ ಮಾಡಿ ತಮ್ಮ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ. ಮಾಜಿ ಸಂಸದೆ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಾರುದು ಎಂದು ಈಗಾಗಲೇ ಕೆಪಿಸಿಸಿ ಕಚೇರಿಗೆ ಪತ್ರವೊಂದು ರವಾನೆಯಾಗಿದೆ.
ಮಾಜಿ ಸಂಸದೆ ತೇಜಸ್ವಿನಿ ಶ್ರೀರಮೇಶ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆಯೂ ಮನವಿ ಮಾಡಿದ್ದರು.
ದೇವನಹಳ್ಳಿ ರೆಸಾರ್ಟ್ ನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡುವ ಕುರಿತು ಯಾವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ನಿಗೂಢವಾಗಿದೆ. ಆದರೆ, ತೇಜಸ್ವಿನಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯ ಕಾಂಗೆಸಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಗೊಟ್ಟಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಮಾರ್, ದೇವನಹಳ್ಳಿ ರೆಸಾರ್ಟ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರೀ ಅವರನ್ನು ಭೇಟಿಯಾಗಿ ತೇಜಸ್ವಿನಿ ಅವರಿಗೆ ಟಿಕೆಟ್ ನೀಡಬಾರದು ಎಂದು ಮನವಿ ಸಲ್ಲಿಸಿದ್ದಾರೆ.
ತೇಜಸ್ವಿನಿ ಕಾರ್ಯಕರ್ತರಿಗೆ ಗೌರವ ಕೊಡುವುದಿಲ್ಲ ಎಂದು ಕೆ.ಕುಮಾರ್ ದೂರಿದ್ದಾರೆ. ಕನಕಪುರದಿಂದ ತೇಜಸ್ವಿನಿ ಅವರು ಸಂಸದೆಯಾಗಿ ಆಯ್ಕೆಯಾದ ನಂತರ ಅಲ್ಲಿನ ಕಾರ್ಯಕರ್ತರನ್ನು ಕಡೆಗಣಿಸಿದರು, ಕಾರ್ಯಕರ್ತರಿಗೆ ಗೌರವ ನೀಡಲಿಲ್ಲ.
ಕಾರ್ಯಕರ್ತರೊಂದಿಗೆ ವಿನಾಕಾರಣ ಜಗಳವಾಡುತ್ತಿದ್ದರು. ಇಂತಹ ಅಭ್ಯರ್ಥಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಲು ನಮ್ಮ ವಿರೋಧವಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮನವಿ ಸ್ವೀಕರಿಸಿದ ಪರಮೇಶ್ವರ್ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಗೊಟ್ಟಿಗೆರೆ, ಕೋಣನ ಕುಂಟೆ, ಅಂಜನಾಪುರ, ವಸಂತಪುರ, ಉತ್ತರಹಳ್ಳಿ, ಎಳಚೇನಹಳ್ಳಿ ಮುಂತಾದ ವಾರ್ಡ್ ಗಳಿವೆ. ಸ್ಥಳೀಯ ಕಾರ್ಯಕರ್ತರ ವಿರೋಧ ಕಟ್ಟಿಕೊಂಡು ಯಾರು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಅಂತಹ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡುವುದಿ ಇಲ್ಲ. ಹಾಗಾದರೆ ತೇಜಸ್ವಿನಿ ಅವರ ಮುಂದಿನ ನಡೆ ಏನು ಎಂದು ಕಾದು ನೋಡಬೇಕು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications