ಡಿಸಿ ಅಯ್ಯಪ್ಪ ತಂಡಕ್ಕೆ 14 ದಿನ ಜೈಲುವಾಸ ಪ್ರಾಪ್ತಿ

ಅಯ್ಯಪ್ಪ, ವಿಶೇಷ ತಹಸೀಲ್ದಾರ್ ಕೆ ಗೋಪಾಲಸ್ವಾಮಿ, ಉಪ ನೋಂದಣಾಧಿಕಾರಿ ಕೆವಿ ರವಿಕುಮಾರ್, ಹೆಸರುಘಟ್ಟ ಹೋಬಳಿ ಕಂದಾಯಾಧಿಕಾರಿ ಎನ್. ಬಾಲಕೃಷ್ಣಮೂರ್ತಿ ತಂಡ ನಿನ್ನೆ ರಾತ್ರಿಯಿಡೀ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಾಸ್ತವ್ಯ ಹೂಡಿತ್ತು. ಪ್ರಕರಣದ ಮೊದಲ ಆರೋಪಿ A1 ಅಯ್ಯಪ್ಪ ಇಡೀ ರಾತ್ರಿ ನಿದ್ದೆ ಮಾಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಚತುಷ್ಟರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಲೋಕಾಯುಕ್ತ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಐಎಎಸ್ ಅಯ್ಯಪ್ಪ ನಿನ್ನೆ ದೇವನಹಳ್ಳಿಗೆ ಹೋಗಿರುವ ಮಾಹಿತಿ ಸಂಗ್ರಹಿಸಿದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಅಂಜನ್ ಕುಮಾರ್ ನೇತೃತ್ವದ ತಂಡ ದೇವನಹಳ್ಳಿಗೆ ಹೋಗಿ ಅವರನ್ನು ಕರೆತಂದು ವಿಚಾರಣೆ ನಡೆಸಿತು, ಅನಂತರ ನಾಲ್ವರನ್ನೂ ಬಂಧಿಸಿದ್ದರು.
ಪ್ರಕರಣದ ವಿವರ ಹೀಗಿದೆ:
ಯಲಹಂಕದ ಮಾದಪ್ಪನಹಳ್ಳಿಯಲ್ಲಿನ ಸರ್ವೇ ಸಂಖ್ಯೆ 62ರಲ್ಲಿರುವ ಸುಮಾರು 60 ಕೋಟಿ ರೂ. ಮೌಲ್ಯದ 31 ಎಕರೆ 27 ಗುಂಟೆ ಸರಕಾರಿ ಭೂಮಿಯ ದಾಖಲೆಗಳನ್ನು ನರಸಿಂಹಯ್ಯ ಎಂಬವರ ಹೆಸರಿಗೆ ಆರೋಪಿಗಳು ಅಕ್ರಮವಾಗಿ ಪರಭಾರೆ ಮಾಡಿದ್ದಾರೆ ಎಂದು ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.
ಸರಕಾರಿ ಭೂಮಿಯ ದಾಖಲೆಗಳನ್ನು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಸಂಬಂಧಿ, ಕುಮ್ಮನಹಳ್ಳಿಯ ನರಸಿಂಹಯ್ಯ (80) ಎಂಬವರ ಹೆಸರಿಗೆ ಅಕ್ರಮವಾಗಿ ಪರಭಾರೆ ಮಾಡಲಾಗಿದ್ದು, ಈ ಸಂಬಂಧ ತನಿಖೆಗೆ ಆದೇಶಿಸುವಂತೆ ಕೋರಿ ಮಾದಪ್ಪನಹಳ್ಳಿ ನಿವಾಸಿ ಹರೀಶ್ ಹಾಗೂ ಅನಿಲ್‌ಕುಮಾರ್ ಎಂಬವರು ಲೋಕಾ ನ್ಯಾಯಾಲಯದಲ್ಲಿ 2012ರ ಅಕ್ಟೋಬರ್ 12ರಂದು ದೂರು ದಾಖಲಿಸಿದ್ದರು.
ಕುತೂಹಲದ ಸಂಗತಿಯೆಂದರೆ ವಯೋವೃದ್ಧ ನರಸಿಂಹಯ್ಯಗೆ ಸದರಿ ಜಮೀನು ತನ್ನ ಹೆಸರಿನಲ್ಲಿರುವುದು ತಿಳಿದೇ ಇಲ್ಲ. ಜತೆಗೆ, ನರಸಿಂಹಯ್ಯ ತನ್ನ ಸಂಬಂಧಿಯೇ ಅಲ್ಲ ಎಂದು ಶಾಸಕ ವಿಶ್ವನಾಥ್ ಹೇಳುತ್ತಾರೆ. ಆದರೆ ಅಗತ್ಯ ಬಿದ್ದಲ್ಲಿ ಶಾಸಕ ವಿಶ್ವನಾಥ್ ಅವರನ್ನೂ ಮುಂದಿನ ದಿನಗಳಲ್ಲಿ ಬಂಧಿಸಲಾಗುವುದು ಎಂದು ಎಡಿಜಿಪಿ ಸತ್ಯನಾರಾಯಣ ಹೇಳುತ್ತಾರೆ.












Click it and Unblock the Notifications