ರಾಷ್ಟೀಯ ಪಕ್ಷಗಳ ಭದ್ರ ಕೋಟೆಯಲ್ಲಿ ಜೆಡಿಎಸ್ ದಾಪುಗಾಲು
ಬೆಂಗಳೂರು, ಮಾ 12: ಸ್ಥಳೀಯ ಸಂಸ್ಥೆ ಚುನಾವಣೆ ಪ್ರಕ್ರಿಯೆ ಮುಗಿದಿದೆ. ಆಡಳಿತ ವಿರೋಧಿ ಅಲೆಯ ಲಾಭವನ್ನು ಪಡೆಯುವಲ್ಲಿ ಕಾಂಗ್ರೆಸ್ ಹೆಚ್ಚುಕಮ್ಮಿ ಯಶಸ್ವಿಯಾಗಿದೆ.
ಕೆಲವೊಂದು ಭದ್ರ ಕೋಟೆಯಲ್ಲಿ ಕೋಟೆ ಕಟ್ಟಿ ಮೆರೆಯುತ್ತಿದ್ದ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ತನ್ನದೇ ನೆಲದಲ್ಲಿ ರಾಜರಂತೆ ದರ್ಬಾರ್ ನಡೆಸುತ್ತಿದ್ದ ಸ್ವಾಭಿಮಾನಿಯ 'ಸ್ವಾಭಿಮಾನಕ್ಕೆ'ಮತದಾರರು ಜಸ್ಟ್ ಡೋಂಟ್ ಕ್ಯಾರ್ ಅಂದಿದ್ದಾರೆ. ಬಳ್ಳಾರಿಯಲ್ಲಿ ಅಕೌಂಟ್ ಓಪನ್ ಮಾಡಲಾಗದೇ BSR ಕಾಂಗ್ರೆಸ್ ಇನ್ನಿಲ್ಲದಂತೆ ನೆಲಕಚ್ಚಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದಂತೆ ಜೆಡಿಎಸ್ ಕೂಡಾ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಹಳೇ ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಮೀಸಲಾಗಿದ್ದ ಜೆಡಿಎಸ್ ತನ್ನ ಶಕ್ತಿಯನ್ನು ಬೇರೆ ಕಡೆಗೂ ವಿಸ್ತರಿಸಿಕೊಂಡಿದೆ.
ಒಟ್ಟು 906 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ತೀವ್ರ ಪೈಪೋಟಿ ಒಡ್ಡಲು ಸಜ್ಜಾಗಿದೆ. ಜೆಡಿಎಸ್ ಪ್ರಾಭಲ್ಯತೆ ಕುಗ್ಗಲಿದೆ ಎನ್ನುವ ಸಮೀಕ್ಷೆಗೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವ್ಯಂಗ್ಯ ನಗು ಬೀರಿದ್ದಾರೆ.
ಸತತ ಮೂರ್ನಾಲ್ಕು ತಿಂಗಳಿನಿಂದ ಸತತ ಪ್ರಚಾರದಲ್ಲಿ ನಿರತರಾಗಿರುವ ಕುಮಾರಸ್ವಾಮಿಗೆ ಕೆಲವೊಂದು ಜಿಲ್ಲೆಗಳಲ್ಲಿ ಮತದಾರರು ಬೆನ್ನುತಟ್ಟಿ ಆಶೀರ್ವದಿಸಿದ್ದಾರೆ. ತನ್ನ 20:20 ಅವಧಿಯಲ್ಲಿ ತೆಗೆದುಕೊಂಡ ಜನಪರ ಕೆಲಸಗಳು ಚುನಾವಣೆಯಲ್ಲಿ ವರ್ಕೌಟ್ ಆಗಲಿದೆ ಎನ್ನುವ ಕುಮಾರಸ್ವಾಮಿ ವಿಶ್ವಾಸಕ್ಕೆ ಜನ ಸಂಪೂರ್ಣ ತಣ್ಣೀರೆರೆಚಿಲ್ಲ.
ಮೈಸೂರು, ಮಂಡ್ಯ, ರಾಮನಗರ,ಹಾಸನ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಸ್ಟ್ರಾಂಗ್ ಆಗಿದ್ದ ಜೆಡಿಎಸ್ ಇತರ ಜಿಲ್ಲೆಗಳಲ್ಲಿ ಅನಿರೀಕ್ಷಿತ ಫಲಿತಾಂಶ ತಂದು ಅಸೆಂಬ್ಲಿ ಚುನಾವಣೆಗೆ ಮುನ್ನ ಒಳ್ಳೆ ಫೌಂಡೇಶನ್ ಹಾಕಿಕೊಂಡಿದೆ.
ತನ್ನ ಭದ್ರ ಕೋಟೆ ಬಿಟ್ಟು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಾಲಿಗೆ ಆಶಾದಾಯಕವಾಗಿರುವ ಜಿಲ್ಲೆಗಳಾವುವು?

ಚಿತ್ರದುರ್ಗ
142 ಕ್ಷೇತ್ರದಲ್ಲಿ 30 ಕ್ಷೇತ್ರದಲ್ಲಿ ಗೆದ್ದು ಜೆಡಿಎಸ್ ನೀಡಿದ ಅಚ್ಚರಿಯ ಫಲಿತಾಂಶ ಕಾಂಗ್ರೆಸ್ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಲಿದೆ. ಜೊತೆಗೆ ಜಿಲ್ಲೆಯಲ್ಲಿ ಕೆಜೆಪಿ ಎನ್ನುವ ಸಣ್ಣ ಗಾಳಿ ಕೂಡಾ ಬೀಸುತ್ತಿದೆ.

ಕೋಲಾರ
166 ಕ್ಷೇತ್ರದಲ್ಲಿ 58 ಕ್ಷೇತ್ರಗಳಲ್ಲಿ ಗೆದ್ದು ಒಂದನೇ ಸ್ಥಾನದಲ್ಲಿರುವ ಜೆಡಿಎಸ್ ಅಸೆಂಬ್ಲಿ ಚುನಾವಣೆಯಲ್ಲಿ ಈ ಜಿಲ್ಲೆಯಿಂದ ಬಹು ನಿರೀಕ್ಷೆ ಇಟ್ಟುಕೊಂಡಿದೆ.

ಚಿಕ್ಕಬಳ್ಳಾಪುರ
146 ಕ್ಷೇತ್ರದಲ್ಲಿ 48 ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ಶಿವಮೊಗ್ಗ
176 ಕ್ಷೇತ್ರದಲ್ಲಿ 40 ಕ್ಷೇತ್ರ ಗೆದ್ದು ಎರಡೂ ರಾಷ್ಟ್ರೀಯ ಪಕ್ಷಕ್ಕೆ ಸಡ್ಡು ಹೊಡೆದಿದೆ. ಜೊತೆಗೆ ಇದು ಯಡಿಯೂರಪ್ಪನವರ ರಾಜಕೀಯ ಕರ್ಮಭೂಮಿ ಎನ್ನುವುದನ್ನು ಮರೆಯುವಂತಿಲ್ಲ.

ತುಮಕೂರು
234 ಕ್ಷೇತ್ರದಲ್ಲಿ 93 ಕ್ಷೇತ್ರ ಗೆದ್ದು ಹೊಸ ಜೆಡಿಎಸ್ ಹೊಸ ನೆಲೆ ಕಂಡುಕೊಂಡಿದೆ.

ಉತ್ತರಕನ್ನಡ
239 ಕ್ಷೇತ್ರದಲ್ಲಿ 41 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಕರಾವಳಿ ಜಿಲ್ಲೆಯಲ್ಲಿ ಬೇರೂರಲರಾಂಭಿಸಿದೆ.

ಬೀದರ್
149 ಕ್ಷೇತ್ರದಲ್ಲಿ 36 ಕ್ಷೇತ್ರಗಳನ್ನು ಗೆದ್ದು ಜೆಡಿಎಸ್ ಮುಂಬರುವ ಚುನಾವಣೆಯಲ್ಲಿ ನಮ್ಮನ್ನು ಕಡೆಗಣಿಸ ಬೇಡಿ ಎನ್ನುವ ಎಚ್ಚರಿಕೆಯನ್ನು ಈ ಚುನಾವಣೆಯ ಮೂಲಕ ನೀಡಿದೆ.

ರಾಯಚೂರು
154 ಕ್ಷೇತ್ರದಲ್ಲಿ 34 ಕ್ಷೇತ್ರಗಳಲ್ಲಿ ಗೆದ್ದಿರುವುದು ವಿಶೇಷ.

ಕೊಪ್ಪಳ
96 ಕ್ಷೇತ್ರದಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದು ಉತ್ತರ ಕರ್ನಾಟಕ ಭಾಗದಲ್ಲಿ ನೆಲೆಯೂರಲಾರಂಭಿಸಿದೆ.












Click it and Unblock the Notifications