ಮೂಡುಬೆಳ್ಳೆಯಲ್ಲಿ ಬಲವಂತ ಮತಾಂತರ ಮಾಡಿಲ್ಲ

ಕಳೆದ 12 ವರ್ಷಗಳಿಂದ ನಾನು ಕುಟುಂಬ ಸಮೇತವಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದು ಬಜರಂಗದಳದವರಿಂದ ಹಲ್ಲೆಗೆ ಒಳಗಾಗಿ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಾಗಿರುವ ಮಟ್ಟಾರಿನ ಜನಾರ್ದನ ಆಚಾರ್ಯ ಹೇಳಿದ್ದಾರೆ. ಮಣಿಪಾಲದ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಅಜೆಕಾರಿನ ಸೂರ್ಯ ಎಂಬವರ ತಲೆಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿದೆ.
ಪ್ರಾರ್ಥನಾ ಮಂದಿರದಲ್ಲಿದ್ದ ರೋಶನ್ ಅವರ ತಾಯಿ ಇಮಿಲಿಯಾ ಲೊಬೊ, ಕಾರ್ಕಳದ ಸೂರ್ಯ, ಶಾಂತಾರಾಮ್, ಪ್ರೇಮಾ ಮೆಂಡೊನ್ಸಾ, ಸಾವಿಯಾ ಜಾನ್‌ಸನ್ ಗಾಯಗೊಂಡು ಉಡುಪಿಯ ಸರ್ಕಾರಿ ಆಸ್ಪತ್ರೆ ದಾಖಲಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ರಮೇಶ್ ಎಂಬುವವರು ಮಣಿಪಾಲ ಕೆ.ಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಹಠಾತ್ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು, ವೃದ್ಧೆಯೊಬ್ಬಳು ಸೇರಿದಂತೆ ಹಲವು ಮಂದಿ ಪ್ರಾರ್ಥನಾ ನಿರತರಿಗೆ ಹಲ್ಲೆ ನಡೆಸಿ, ಪೀಠೋಪಕರಣಗಳನ್ನು ಪುಡಿಗೈದಿದ್ದರು. ಕಟ್ಟಿಂಗೇರಿಯ ರೋಶನ್ ರಾಜೇಶ್ ಲೋಬೊ ಎಂಬವರ ಮನೆಯಲ್ಲಿ ಸ್ಥಾಪಿಸಲಾಗಿರುವ 'ವರ್ಡ್ಸ್ ಆಫ್ ವಿಕ್ಟರಿ' ಎಂಬ ಪ್ರಾರ್ಥನಾ ಮಂದಿರ ದಲ್ಲಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಿರ್ವ ಮಟ್ಟಾರಿನ ಬಜರಂಗದಳದ ಕಾರ್ಯಕರ್ತರು ಈ ದಾಳಿ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ದಂತೆ ಒಟ್ಟು 19 ಮಂದಿ ಬಜರಂಗದಳ ಕಾರ್ಯಕರ್ತರನ್ನು ಶಿರ್ವ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ ಅವರು, ಘಟನಾ ಸ್ಥಳದಲ್ಲಿ ಪ್ರಾರ್ಥನೆ ನಡೆಯುತ್ತಿರುವ ಕುರಿತು ಮಾಹಿತಿ ಇದೆಯೇ ಹೊರತು ಅಲ್ಲಿ ಮತಾಂತರ ನಡೆಯುತ್ತಿರುವ ಬಗ್ಗೆ ನಮಗೆ ಯಾವುದೇ ದೂರುಗಳು ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.












Click it and Unblock the Notifications