Forbes ಗೋಲ್ ಮಾಲ್: ಶ್ರೀಮಂತಿಕೆ ಏರುಪೇರು

'Forbes ಪತ್ರಿಕೆ ಎಡವಟ್ಟು ಮಾಡಿಕೊಂಡು ನನ್ನನ್ನು ಜಗತ್ತಿನ 26ನೇ ಅತ್ಯಧಿಕ ಧನಿಕ ಎಂದು ಲೆಕ್ಕಾಚಾರ ಮಾಡಿದೆ. ಆದರೆ ವಾಸ್ತವವಾಗಿ ನಾನೇ ವಿಶ್ವದ ಶ್ರೀಮಂತ ನಂಬರ್ 1' ಎಂದು ಸೌದಿ ಅರೇಬಿಯಾದ ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಹೇಳಿಕೊಂಡಿದ್ದಾರೆ.
'ಶ್ರೀಮಂತಿಕೆ ಲೆಕ್ಕಾಚಾರದಲ್ಲಿ ಫೋರ್ಬ್ಸ್ ಪತ್ರಿಕೆ ಜತೆ ಇಷ್ಟು ವರ್ಷ ನಾವು ಅತ್ಯಂತ ಮುಕ್ತವಾಗಿ ನಡೆದುಕೊಳ್ಳುತ್ತಿದ್ದೆವು. ಈ ಹಿಂದೆಯೂ ಇಂತಹ ತಪ್ಪುಗಳು ನಡೆದಿವೆ. ಆದರೆ ಪತ್ರಿಕೆ ಎಚ್ಚೆತ್ತುಕೊಂಡಿಲ್ಲ. ಹಾಗಾಗಿ ಅನಿವಾರ್ಯವಾಗಿ ಆ ಪತ್ರಿಕೆಯ ಜತೆ ಸಂಬಂಧ ಕಡಿದುಕೊಳ್ಳುತ್ತಿದ್ದೇವೆ' ಎಂದು ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಸ್ಪಷ್ಟಪಡಿಸಿದ್ದಾರೆ.
ಪೋರ್ಬ್ಸ್ ಪತ್ರಿಕೆ ಪ್ರತಿ ವರ್ಷದಂತೆ ಮೊನ್ನೆಯೂ ಒಂದು ಪಟ್ಟಿ ಬಿಡುಗಡೆ ಮಾಡಿ ನೋಡಿ ವಿಶ್ವದ ಶ್ರೀಮಂತರು ಇವರೇ ಎಂದು ಸಾರಿತ್ತು. ಅದರಲ್ಲಿ ರಾಜಕುಮಾರ ಅಲ್ವಾಲೀದ್ ಬಿನ್ ತಲಾಲ್ ಅವರನ್ನು 26ನೇ ಸ್ಥಾನದಲ್ಲಿ ಕುಳ್ಳರಿಸಿ, ಈತನ ಸಂಪತ್ತು ಕೇವಲ 20 ಶತಕೋಟಿ ಡಾಲರ್ ಅಷ್ಟೇ ಎಂದು ಹೇಳಿತ್ತು.
ಇದರಿಂದ ಸಿಟ್ಟಿಗೆದ್ದ ರಾಜಕುಮಾರ ಅಲ್ವಾಲೀದ್ ಅವರ ವಕ್ತಾರರು ಪೋರ್ಬ್ಸ್ ಲೆಕ್ಕಾಚಾರದಲ್ಲಿ ಎಡವಿದೆ. ನಮ್ಮ ಮಾಲೀಕ್ ಬಳಿ 29.6 ಶತಕೋಟಿ ಡಾಲರ್ ಸಂಪತ್ತು ಇದೆ. ಇದರಿಂದ ಅವರ ಸ್ಥಾನ ಟಾಪ್ ಟೆನ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕು ಎಂದು ಸ್ಪಷ್ಟನೆ ನೀಡಿದ್ದಾರೆ.
ಸೌದಿ ಅರೇಬಿಯಾದ ಷೇರು ಮಾರುಕಟ್ಟೆಯಲ್ಲಿ ತಮ್ಮ ಮಾಲೀಕರು ಹೊಂದಿರುವ ಷೇರುಗಳ ಮೌಲ್ಯವನ್ನೇ ಪರಿಗಣಿಸಿಲ್ಲ ಎಂದು ವಕ್ತಾರರು ಕಿಡಿಕಾರಿದ್ದಾರೆ. ಮಧ್ಯ ಪ್ರಾಚ್ಯ ಹೂಡಿಕೆದಾರರಿಗೆ ಕಂಟಕವಾಗುವ ಮಾದರಿ ಪೋರ್ಬ್ಸ್ ತಪ್ಪು ಲೆಕ್ಕಾಚಾರ ಹಾಕಿದೆ ಎಂದು ಅವರು ದೂರಿದ್ದಾರೆ.
ಹಾಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೀವೂ ಬೇಡ, ನಿಮ್ಮ ಸಹವಾಸವೂ ಬೇಡ. ನಮ್ಮ ಶ್ರೀಮಂತಿಕೆಯನ್ನು ನಾವೇ ಲೆಕ್ಕ ಹಾಕಿಕೊಳ್ಳುತ್ತೇವೆ. ಲೆಕ್ಕಾಚಾರಕ್ಕಾಗಿ ನೀವು ಇಂದಿನಿಂದಲೇ ನಮ್ಮ ಬಳಿಗೆ ಬರಬೇಡಿ ಎಂದು ರಾಜಕುಮಾರನ ವಕ್ತಾರರು ಪತ್ರಿಕೆ ಖಾರವಾಗಿ ಪತ್ರ ಬರೆದು ತಿಳಿಸಿದ್ದಾರೆ.
ಫೋರ್ಬ್ಸ್ ಪತ್ರಿಕೆ ಜತೆಗೆ ಎಲ್ಲ ವ್ಯಾವಹಾರಿಕ ಸಂಬಂಧ ಕಡಿದುಕೊಳ್ಳಲಾಗಿದೆ. ಹಾಗಾಗಿ ಇನ್ಮುಂದೆ ನಿಮ್ಮ ಪತ್ರಿಕೆಯಲ್ಲಿ ನಮ್ಮ ರಾಜಕುಮಾರನ ಹೆಸರನ್ನು ಹಾಕಲೇಬೇಡಿ ಎಂದೂ ಅವರು ತಾಕೀತು ಮಾಡಿದ್ದಾರೆ.
ರಿಚಿ ರಿಚ್: ಅಂದಹಾಗೆ, ಕಾರ್ಲೊಸ್ ಸ್ಲಿಮ್ ನಾಲ್ಕನೆಯ ವರ್ಷವೂ ವಿಶ್ವದ ಅತಿ ದೊಡ್ಡ ಶ್ರೀಮಂತ (73 ಶತಕೋಟಿ ಡಾಲರ್) ಎನಿಸಿಕೊಂಡಿದ್ದರೆ ಭಾರತದ ಮುಕೇಶ್ ಅಂಬಾನಿ ಈ ಬಾರಿ 22ನೇ ಸ್ಥಾನಕ್ಕೇರಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ


Click it and Unblock the Notifications
