ಟಾಟಾ- ಏರ್ ಏಷ್ಯಾ ವಿಮಾನಯಾನಕ್ಕೆ ಗ್ರೀನ್ ಸಿಗ್ನಲ್

ಮಲೇಷ್ಯಾದ ಅಗ್ಗದ ವಿಮಾನ ಯಾನ ಸಂಸ್ಥೆ ಏರ್‌ಏಷ್ಯಾದ ಹೂಡಿಕೆ ಪ್ರಸ್ತಾಪಕ್ಕೆ ಅನುಮೋದನೆ ಸಿಕ್ಕಿರುವುದು ಟಾಟಾ ಸಮೂಹಕ್ಕೆ ರೆಕ್ಕೆ ಪುಕ್ಕ ಬಂದ ಹಾಗೆ ಆಗಿದೆ. ಇದು ಶೇ.49 ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುವ ನೀತಿ ಅನ್ವಯ ನಡೆಯಲಿದೆ. ರು.80 ಸಾವಿರ ಕೋಟಿ ಪ್ರಾಥಮಿಕ ಹೂಡಿಕೆಯಾಗಲಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಾಂಗ ವ್ಯವಹಾರ ಕಾರ್ಯದರ್ಶಿ ಅರವಿಂದ ಮಾಯಾರಾವತ್ ನೇತೃತ್ವದ ವಿದೇಶಿ ಹೂಡಿಕೆ ಅಭಿವೃದ್ಧಿ ಮಂಡಳಿಯು ಇಂದು ನಡೆಸಿದ ಸಭೆಯಲ್ಲಿ ಪ್ರಸ್ತಾಪಗಳನ್ನು ಅನುಮೋದಿಸಿದೆ.
ಟಾಟಾ ಸನ್ಸ್ ಲಿ. ಹಾಗೂ ಅರುಣ್ ಭಾಟಿಯಾರ ಟೆಲಿಸ್ಟ್ರಾ ಟ್ರೇಡ್‌ಪ್ಲೇಸ್ ಪ್ರೈ. ಲಿ. ಸಂಸ್ಥೆಗಳೊಂದಿಗೆ ಶೇ.49 ಪಾಲುದಾರಿಕೆಯ ಸಾಹಸದ ಪ್ರಸ್ತಾಪವನ್ನು ಏರ್‌ಏಶಿಯಾ ಮುಂದುವರಿಸಿತ್ತು. ಮುಂದಿನ ಅನುಮತಿಗಾಗಿ ಅದಿನ್ನು ಡಿಜಿಸಿಎಯನ್ನು ಸಂಪರ್ಕಿಸಬೇಕಾಗುತ್ತದೆ. ಏರ್‌ಏಶಿಯಾ ಡಿಜಿಸಿಎಯಿಂದ ಅಗತ್ಯ ಪರವಾನಿಗೆಯನ್ನು ಪಡೆಯಬೇಕಾಗಿದೆಯೆಂದು ಅಧಿಕಾರಿ ತಿಳಿಸಿದ್ದಾರೆ.
ಏರ್ ಏಷ್ಯಾ ವಿಮಾನಯಾನ ಸಂಸ್ಥೆ ಹಾಗೂ ಟಾಟಾ ಸನ್ಸ್ ಮತ್ತು ಟೆಲೆಸ್ಟ್ರಾ ಟ್ರೇಡ್ ಪ್ಲೇಸ್ ಜತೆ ಜಂಟಿಯಾಗಿ ವಿಮಾನಯಾನ ಆರಂಭಿಸಲು ಪ್ರಸ್ತಾಪವನ್ನು ಮುಂದಿಟ್ಟಿದೆ, ಅದಕ್ಕೆ ಬೇಕಾದ ಅಜಿ೯ಗಳನ್ನು ಈಗಾಗಲೇ ಸಲ್ಲಿಸಿರುವ ಸುದ್ದಿ ಇತ್ತೀಚೆಗೆ ಹೊರ ಬಿದ್ದಿದೆ.
ವಿಮಾನಯಾನ ವಲಯದಲ್ಲಿ ಎಫ್ ಡಿಐ ನಿಯಮಗಳನ್ನು ಸಡಿಲಗೊಳಿಸಿದ ನಂತರ ಏರ್ ಏಷ್ಯಾ ಈ ಹೊಸ ಸಂಬಂಧಕ್ಕೆ ಹಸ್ತ ಚಾಚಿದೆ. ಕಳೆದ ಸಪ್ಟೆಂಬರ್ ನಲ್ಲಿ ಯುಪಿಎ ಸಕಾ೯ರ ವಿಮಾನಯಾನ ವಲಯದಲ್ಲಿ ಶೇ.49 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಿತ್ತು.
ಕಳೆದ ವರ್ಷ ಸ್ಪೈಸ್ ಜೆಟ್ ವಿಮಾನಯಾನ ಜೊತೆ ಒಪ್ಪಂದ ಮಾಡಿಕೊಳ್ಳಲು ಯತ್ನಿಸಿದ್ದ ಏರ್ ಏಷ್ಯಾ ಬರಿಗೈನಲ್ಲಿ ಹಿಂತಿರುಗಿತ್ತು. ಈಗ ಟಾಟಾ ಸಮೂಹದ ಕೈ ಹಿಡಿದಿದೆ. ಮಲೇಶಿಯಾ ಮೂಲದ ಏರ್ ಏಷ್ಯಾ ಬರ್ಹಾದ್ ಸಂಸ್ಥೆ ಭಾರತದಲ್ಲಿ ದೇಶಿ ವಿಮಾನಯಾನ ನಡೆಸಲು FIPB ಅನುಮತಿ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದೆ.
ಕಡಿಮೆ ವೆಚ್ಚದಲ್ಲಿ ವಿಮಾನಯಾನ ಸೇವೆ ಒದಗಿಸುವ ಏಷ್ಯಾದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ. ಸುಮಾರು 118 ಏರ್ ಕ್ರಾಫ್ಟ್ ಗಳನ್ನು ಹೊಂದಿದ್ದು, ದಕ್ಷಿಣ ಭಾರತದಿಂದ ಏಷ್ಯಾದ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಒದಗಿಸುವ ಮಹತ್ವದ ಯೋಜನೆ ಹೊಂದಿದೆ. ಸದ್ಯಕ್ಕೆ ಥೈಲ್ಯಾಂಡ್ ಹಾಗೂ ಮಲೇಶಿಯಾದಲ್ಲಿ ಮುಖ್ಯ ಕೇಂದ್ರಗಳನ್ನು ಹೊಂದಿದೆ.
ಈಗಾಗಲೇ ಚೆನ್ನೈ, ಬೆಂಗಳೂರು, ತಿರುಚಿನಾಪಳ್ಳಿ, ಕೊಚ್ಚಿ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಹಾರಾಟ ನಡೆಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಸೂಕ್ತ ಅವಕಾಶ ಒದಗಿ ಬಂದಿದೆ.
ದೇಶಿ ವಿಮಾನಯಾನವನ್ನು ಇನ್ನಷ್ಟು ಬಲಪಡಿಸಿ, ಅಂತಾರಾಷ್ಟ್ರೀಯ ಪ್ರಮುಖ ನಗರಗಳಿಗೆ ಸಂಪರ್ಕ ಒದಗಿಸುವುದು ನಮ್ಮ ಗುರಿ. ಕಡಿಮೆ ವೆಚ್ಚದಲ್ಲಿ ಸುಖ ಪ್ರಯಾಣ ಒದಗಿಸುವುದು ನಮ್ಮ ಮೂಲ ಮಂತ್ರ ಎಂದು ಏರ್ ಏಷ್ಯಾ ಸ್ಥಾಪಕ ಹಾಗೂ ಸಮೂಹದ ಸಿಇಒ ಟೋನಿ ಫರ್ನಾಂಡೀಸ್ ಹೇಳಿದ್ದಾರೆ.


Click it and Unblock the Notifications
