ಶಿವಯೋಗಿ ಸ್ವಾಮೀಜಿ ಕ್ಷಮೆ ಕೋರಿದ್ದು ಯಾಕೆ?

Posted By:
Subscribe to Oneindia Kannada
Mahalingeshwara Mutt seer apologizes public
ಬೆಂಗಳೂರು, ಮಾ. 5 : ಸುಮಾರು 400 ಕೋಟಿ ರು. ಆಸ್ತಿಯುಳ್ಳ ಮಹಾಲಿಂಗೇಶ್ವರ ಮಠದ ಉತ್ತರಾಧಿಕಾರತ್ವಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ವಿವಾದದ ಬಗ್ಗೆ ಮಠದ ಉಸ್ತುವಾರಿಯಲ್ಲಿರುವ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಸಾರ್ವಜನಿಕರ ಕ್ಷಮೆ ಕೋರಿದ್ದಾರೆ.

ಸ್ನೇಹಿತರೊಬ್ಬರ ಮಾತು ಕೇಳಿ ಆಶ್ರಮಕ್ಕೆ ಹೋಗಿದ್ದೆ. ಸನ್ಮಾನವನ್ನೂ ಮಾಡಿಸಿಕೊಂಡೆ. ಸೌಜನ್ಯಕ್ಕೆಂದು ಅಲ್ಲಿಗೆ ಹೋಗಿದ್ದು ಇಷ್ಟು ದೊಡ್ಡ ವಿವಾದವಾಗುತ್ತದೆಂದು ತಿಳಿದಿರಲಿಲ್ಲ. ಅಲ್ಲಿ ಹೋಗಿ ನಿತ್ಯಾನಂದನನ್ನು ಭೇಟಿಯಾಗಬಾರದಿತ್ತು. ಇನ್ನು ಮುಂದೆ ಆಶ್ರಮದ ಜೊತೆ ಸಂಪರ್ಕ ಬೆಳೆಸಿಕೊಳ್ಳುವುದಿಲ್ಲ. ಜನರು ಈ ಗೊಂದಲಕ್ಕಾಗಿ ಕ್ಷಮಿಸಬೇಕು ಎಂದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪುರ ಗ್ರಾಮದಲ್ಲಿರುವ ಮಹಾಲಿಂಗೇಶ್ವರ ಮಠದ ಶಿವಯೋಗಿ ಸ್ವಾಮೀಜಿ ಕೋರಿದ್ದಾರೆ.

ಈ ಪ್ರಕರಣ ಕುರಿತಂತೆ ಅನೇಕ ಗೊಂದಲದ ಪ್ರಶ್ನೆಗಳು ಉದ್ಭವವಾಗಿವೆ. ಮೊದಲನೆಯದಾಗಿ ಮಠದ ಸ್ವಾಮೀಜಿ ನಿತ್ಯಾನಂದನನ್ನು ಭೇಟಿಯಾಗಲು ಹೋಗಿದ್ದೇಕೆ? ಅವರು ನಿತ್ಯಾನಂದನೊಂದಿಗೆ ಮಾತುಗಳನ್ನೇ ಆಡದಿದ್ದರೆ ಮಠದ ಉತ್ತರಾಧಿಕಾತ್ವಕ್ಕೆ ಸಂಬಂಧಿಸಿದಂತೆ ಮಾತುಗಳು ಎದ್ದಿರುವುದಾದರೂ ಹೇಗೆ? ಸರಿಯಾದ ಉತ್ತರ ನೀಡಲು ಸ್ವಾಮೀಜಿ ಏಕೆ ತಡವರಿಸುತ್ತಿದ್ದಾರೆ? ತಪ್ಪೇ ಮಾಡದಿದ್ದರೆ ಜನರಲ್ಲಿ ಅವರು ಕ್ಷಮೆ ಕೋರಿದ್ದಾದರೂ ಏಕೆ? ಮಠದ ಭಕ್ತಾದಿಗಳು ಮಠ ಹೊಸ ಸ್ವಾಮೀಜಿನ್ನು ನೇಮಿಸಬೇಕು, ಟ್ರಸ್ಟ್ ನಿರ್ಮಿಸಬೇಕು ಎಂದು ಕೇಳುತ್ತಿರುವುದಾದರೂ ಏತಕೆ?

ಖಾಸಗಿ ವಾಹಿನಿಗೆ ಲಭ್ಯವಾಗಿರುವ ಸಿಡಿಯಲ್ಲಿ ನಿತ್ಯಾನಂದ ತನ್ನ ಶಿಷ್ಯ ಶಾಂತಿಮಯಾನಂದ ಅವರಿಗೆ ಮಹಾಲಿಂಗೇಶ್ವರ ಮಠದ ಉಸ್ತುವಾರಿ ವಹಿಸಿಕೊಳ್ಳಲು ಆದೇಶಿಸಿರುವುದು ಭಾರೀ ವಿವಾದವನ್ನು ಸೃಷ್ಟಿಸಿದೆ. ನೀನು ಕೂಡಲೆ ಅಲ್ಲಿಗೆ ಹೋಗಿ ಶಿವಯೋಗಿ ರಾಜೇಂದ್ರ ಸ್ವಾಮೀಜಿಯನ್ನು ಭೇಟಿ ಮಾಡಿ ಎಲ್ಲವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಹೇಳಿರುವುದು ಸಿಡಿಯಲ್ಲಿ ದಾಖಲಾಗಿದೆ. ತಾವೇ ಉತ್ತರಾಧಿಕಾರಿಯಾಗಲು ಶಿವಯೋಗಿ ಸ್ವಾಮೀಜಿ ಒಪ್ಪಿದ್ದಾರೆ ಎಂದು ನಿತ್ಯಾನಂದ ಹೇಳಿರುವುದು ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ.

ಈ ನಡುವೆ, ಮಹಾಲಿಂಗಪುರದಲ್ಲಿರುವ 11ನೇ ಶತಮಾನದಲ್ಲಿ ಸ್ಥಾಪಿತವಾಗಿರುವ, ಮುರುಘಾ ಪರಂಪರೆಯ ಮಹಾಲಿಂಗೇಶ್ವರ ಮಠದ ಬಳಿ ವೀರಶೈವ ಭಕ್ತಾದಿಗಳು ಜಮಾಯಿಸಿದ್ದರು, ನಿತ್ಯಾನಂದನ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ವೇಳೆ ನಿತ್ಯಾನಂದ ಇಲ್ಲಿಗೆ ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ, ಅವರನ್ನು ಇಲ್ಲಿಂದ ಒದ್ದು ಓಡಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಮಠಕ್ಕೆ ಟ್ರಸ್ಟ್ ಮಾಡಬೇಕು, ಒಬ್ಬರ ಉಸ್ತುವಾರಿಗೆ ನೀಡಬಾರದು ಎಂದು ಆಗ್ರಹಿಸುತ್ತಿದ್ದಾರೆ. ನಿತ್ಯಾನಂದನೊಡನೆ ಮಠದ ಸ್ವಾಮೀಜಿ ನಡೆದುಕೊಂಡ ರೀತಿಯ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ವ್ಯಾಪಕ ಪ್ರತಿಭಟನೆಗಳಾಗುತ್ತಿವೆ. ಭಕ್ತಾದಿಗಳು ಮಠದ ಅತ್ರಿಕ್ರಮಣದ ವಿರುದ್ಧ ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ. ವೀರಶೈವರ ಮಠದ ಉಸ್ತುವಾರಿ ವಹಿಸಿಕೊಳ್ಳಲು ನಿತ್ಯಾನಂದ ಯಾರು? ಕೇವಲ ವೀರಶೈವ ಪಂಗಡದವರು ಮಾತ್ರ ವಹಿಸಿಕೊಳ್ಳಬೇಕಾದ ಉಸ್ತುವಾರಿಯನ್ನು ವಿವಾದಿತ ಸ್ವಾಮಿ ನಿತ್ಯಾನಂದ ವಹಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಜನರು ಕೇಳುತ್ತಿದ್ದಾರೆ. ಮುಧೋಳದಲ್ಲಿ ಉದ್ವಿಗ್ನದ ವಾತಾವರಣ ಸೃಷ್ಟಿಯಾಗಿದೆ.

ಬಿಡದಿಯಲ್ಲಿರುವ ಧ್ಯಾನಪೀಠಂ ಆಶ್ರಮದ ಬಳಿಯೂ ಜನರು ಜಮಾಯಿಸಿದ್ದು, ಲಿಂಗಾಯತ ಮಠವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ನಿತ್ಯಾನಂದ ನಡೆಸುತ್ತಿರುವ ಹುನ್ನಾರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಬಿಡದಿ ಆಶ್ರಮಕ್ಕೆ ಆಗಮಿಸಿದ್ದು, ಯಾವುದೇ ಅವಘಡ ಸಂಭವಿಸದಂತೆ ಕ್ರಮ ತೆಗೆದುಕೊಂಡಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahalingeshwara Mutt seer Sri Shivayogi Rajendra Swamiji has apologized the public for meeting Nithyananda in Bidadi. Nithyananda has said that Shivayogi swamiji has agreed to give charge of Mutt in Jamakhandi. But, Mahalingeshwara seer has denied this statement.
Please Wait while comments are loading...