ಬಂದಿಖಾನೆ ಸಚಿವನ ಮೇಲೆ 48 ಕ್ರಿಮಿನಲ್ ಕೇಸ್

ಡಿವೈಎಸ್ಪಿ ಜಿಯಾ ಉಲ್ ಹಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಜಾಭಯ್ಯಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ರಾಜಾಭಯ್ಯ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಂಗೀಕರಿಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧಿನಾಯಕ ಮುಲಾಯಂಸಿಂಗ್ ಯಾದವ್ ಖಚಿತಪಡಿಸಿದ್ದಾರೆ.
ಗೂಂಡಾ ರಾಜ್ಯದ ದೊಣ್ಣೆನಾಯಕ: ಸಿನಿಮಾಗಳಲ್ಲಿ ಕಂಡು ಬರುವಂತೆ ಶಸ್ತ್ರಧಾರಿ ಗನ್ ಮ್ಯಾನ್ ಗಳ ಜೊತೆ ಠಾಕೂರ್ ನಂತೆ ಮಿಂಚುತ್ತಿದ್ದ ರಾಜಾ ಭಯ್ಯಾ ಅಲಿಯಾಸ್ ಕುವರ್ ರಘುರಾಜ್ ಪ್ರತಾಪ್ ಸಿಂಗ್ ಮಾಮೂಲಿ ವ್ಯಕ್ತಿಯಲ್ಲ. ಐದು ಬಾರಿ ಕುಂದ ಅಸೆಂಬ್ಲಿ ಕ್ಷೇತ್ರದಲ್ಲಿ ಪಕ್ಷೇತರನಾಗಿ ಗೆದ್ದಸಾಧನೆ ಬೆನ್ನ ಹಿಂದೆ ಹೊತ್ತಿದ್ದಾರೆ. ಜೊತೆಗೆ ಸುಮಾರು 48 ಕ್ರಿಮಿನಲ್ ಕೇಸು ಗಳನ್ನು ಕೂಡಾ.
ಮಾಯಾವತಿ ಅಧಿಕಾರದಲ್ಲಿದ್ದ ಕಾಲದಲ್ಲಿ ರಾಜಾಭಯ್ಯ 5 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಕೊಲೆ ಯತ್ನ, ಡಕಾಯಿತಿ, ಕಿಡ್ನಾಪ್ ಸೇರಿದಂತೆ 48 ಕೇಸುಗಳನ್ನು ಮೈಮೇಲೆ ಹಾಕಿಕೊಂಡಿದ್ದರೂ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಅಖಿಲೇಶ್ ಯಾದವ್ ಸಂಪುಟದಲ್ಲಿ ಪ್ರಮುಖ ಸ್ಥಾನ ಪಡೆದರು. ಆಹಾರ ಮತ್ತು ನಾಗರಿಕ ಪೂರೈಕೆ ಜೊತೆಗೆ ಬಂದಿಖಾನೆ ಸಚಿವರಾದರು.
ನವೆಂಬರ್ 2002ರಲ್ಲಿ ಮಯಾವತಿ ಸರ್ಕಾರ 'ಪೋಟಾ' (Prevention of Terrorism Act ) ಕಾಯ್ದೆಯಡಿಯಲ್ಲಿ ಆರೋಪಗಳ ಪಟ್ಟಿ ದಾಖಲಿಸಿದ್ದರು. 2003ರಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿಯಾದ ಅರ್ಧಗಂಟೆಯಲ್ಲೇ ರಾಜಾ ಭಯ್ಯಾ ಅವರ ಮೇಲಿನ ಎಲ್ಲಾ ಆರೋಪಗಳನ್ನು ಕೈ ಬಿಟ್ಟಿದ್ದರು.
ಆದರೆ, ಇದೇ ಮುಂದೆ ಪೋಟಾ ಕೇಸ್ ಪೊಲೀಸ್ ಅಧಿಕಾರಿಯ ಹತ್ಯೆಗೆ ಕಾರಣವಾಯಿತು. ರಾಜಾಭಯ್ಯಾ ವಿರುದ್ಧ ತನಿಖೆ ನಡೆಸುತ್ತಿದ್ದ ಡಿವೈಎಸ್ ಪಿ ರಾಮ್ ಶಿರೋಮಣಿ ಪಾಂಡೆ 2007ರಲ್ಲಿ ರಸ್ತೆ ಅಪಘಾತದಲ್ಲಿ ಅಸುನೀಗಿದರು. ಅಲಹಾಬಾದ್ ಕೋರ್ಟಿನಲ್ಲಿ ರಾಜಾಭಯ್ಯ ವಿರುದ್ಧ ಚಾರ್ಛ್ ಶೀಟ್ ಸಲ್ಲಿಸಲು ಹೋಗುತ್ತಿದ್ದ ಪಾಂಡೆ ಅಪಘಾತದಲ್ಲಿ ಸತ್ತಿದ್ದು ಎಂದರೆ ಯಾರೂ ನಂಬುವುದಿಲ್ಲ.
ಪ್ರಭಾವಿ ರಾಜಕಾರಣಿ : ಇಷ್ಟಾಗಿ ಡಕಾಯಿತಿ ದೊರೆಯೊಬ್ಬನ ಪ್ರೊಫೈಲ್ ಹೋಲುವ ರಾಜಾಭಯ್ಯಾನ ಕಥೆಯಲ್ಲೂ ಟ್ವಿಸ್ಟ್ ಇದೆ. ರಾಜಾಭಯ್ಯಾ ಪ್ರಭಾವಿ ರಾಜಕಾರಣಿ ಮಾತ್ರವಲ್ಲ ಕಾನೂನು ಪದವೀಧರ ಎಂಬುದು ವಿಶೇಷ. ಕ್ರಿಮಿನಲ್ ಕೃತ್ಯದಿಂದ ಹೇಗೆ ಹೊರಬರಬೇಕು ಎಂಬುದನ್ನು ಕೂಡಾ ಕಲಿತವರು. ರಾಜಾಭಯ್ಯಾ ಅವರ ಅಜ್ಜ ರಾಜಾ ಬಜರಂಗ್ ಬಹೂದ್ದರ್ ಸಿಂಗ್ ಅವರು ಪಂತ್ ನಗರ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದರು. ನಂತರ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು. ಆದರೆ, ರಾಜಾ ಬರೀ ಕಿಂಗ್ ಅಲ್ಲದೆ, ಚುನಾವಣೆ ಸಂದರ್ಭದಲ್ಲಿ ಕಿಂಗ್ ಮೇಕರ್ ಆಗಿ ಮೆರೆದವರು.
ರಾಜಾಭಯ್ಯಾನಿಗೆ ಏನಾದರೂ ಆದರೆ, ಇಡೀ ಉತ್ತರಪ್ರದೇಶ ಸಂಪುಟವೇ ಅಲ್ಲಾಡುವ ಸಂಭವವಿದೆ. ಪ್ರತಾಪ್ ಘರ್ ನಲ್ಲಿ ಸುಮಾರು 5 ಅಸೆಂಬ್ಲಿ ಕ್ಷೇತ್ರ ಹಾಗೂ ಅಷ್ಟೇ ಲೋಕಸಭಾ ಕ್ಷೇತ್ರಗಳ ಮೇಲೆ ರಾಜಾಭಯ್ಯಾ ಸಂಪೂರ್ಣ ಹಿಡಿತ ಹೊಂದಿದ್ದಾರೆ. ಅಖಿಲೇಶ್ ಯಾದವ್ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಬಂದಿಖಾನೆ ಸಚಿವರಾಗುವುದಕ್ಕೂ ಮೊದಲು ಭಾರತೀಯ ಜನತಾ ಪಕ್ಷದ ಹಾಗೂ ಅಧಿನಾಯಕ ಕಲ್ಯಾಣ್ ಸಿಂಗ್ ಗೆ ಹತ್ತಿರವಾಗಿದ್ದರು ಎಂಬುದನ್ನು ಮರೆಯುವಂತಿಲ್ಲ.


Click it and Unblock the Notifications
