ಹೇಳಿ ಬಿಎಸ್ ವೈ ನಿಮ್ಗೆ ಒತ್ತಡ ಹಾಕಿದ್ದು ಯಾರು?

ಕಾರಾಗೃಹದಲ್ಲಿರುವ ಜನಾರ್ದನ ರೆಡ್ಡಿ, ಯಡಿಯೂರಪ್ಪ ಆಡಳಿತಾವಧಿ ಯಲ್ಲಿ ಸಚಿವರಾಗಿದ್ದಾಗ ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಅವರನ್ನು ವಜಾ ಮಾಡಿದಾಗ ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಒತ್ತಾಯ ಮಾಡಿದ ಬಿಜೆಪಿ ವರಿಷ್ಠ ನಾಯಕರು ಯಾರು ಎಂಬುದನ್ನು ಬಿಎಸ್‌ವೈ ಬರಂಗಪಡಿಸಲಿ. ಆಗ ಬಿಜೆಪಿ ರಾಷ್ಟ್ರೀಯ ಮುಖಂಡರ ಬಂಡವಾಳ ಬಯಲಿಗೆ ಬರಲಿದೆ ಎಂದು ಹರಿಪ್ರಸಾದ್ ಲೇವಡಿ ಮಾಡಿದರು.
ಬಿಎಸ್ ಯಡಿಯೂರಪ್ಪ ಹಾಗೂ ಕರ್ನಾಟಕ ಜನತಾ ಪಕ್ಷದ ಜೊತೆ ಕೈ ಜೋಡಿಸಲು ಕಾಂಗ್ರೆಸ್ ಮುಂದಾಗಿಲ್ಲ. ಯಡಿಯೂರಪ್ಪ ಅವರು ಎಂದಿಗೂ ಕಾಂಗ್ರೆಸ್ ನೆರವು ಕೇಳಿಕೊಂಡು ಬಂದಿಲ್ಲ. ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಹರಿಪ್ರಸಾದ್ ಹೇಳಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ. ಅಲ್ಲಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಮಾತ್ರ ಚರ್ಚೆಯಾಗಿದೆ. 2008ರ ಲೋಕಸಭಾ ಚುನಾವಣೆಯಲ್ಲಿ ರಾಜನಾಥ್ ಸಿಂಗ್ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಯುಪಿಎ ಅಧಿಕಾರಕ್ಕೆ ಬಂದಿತ್ತು. ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಯುಪಿಎ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸದಿಂದ ನುಡಿದರು.
ಸಚಿವ ಸಂಪುಟದ ಅರ್ಧ ಡಜನ್ ಮಂತ್ರಿಗಳು ಕಾರಾಗೃಹದಲ್ಲಿದ್ದರೆ, ಉಳಿದರ್ಧ ಡಜನ್ ಸಚಿವರು ಜಾಮೀನಿನ ಮೇಲಿದ್ದಾರೆ. ಇನ್ನುಳಿದವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಇನ್ನೂ ಕೆಲವರು ಕಾರಾಗೃಹಕ್ಕೆ ಹೋಗಲು ಸರದಿ ಸಾಲಿನಲ್ಲಿ ನಿಂತಿದ್ದು, ಇದು ಈ ರಾಜ್ಯದ ದುರಂತ ಎಂದು ಹರಿಪ್ರಸಾದ್ ವಿಶ್ಲೇಷಣೆ ಮಾಡಿದರು.
ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿ ಆಂತರಿಕ ಕಚ್ಚಾಟದಲ್ಲಿ ಮುಳುಗಿರುವ ಬಿಜೆಪಿ, ಕೇಂದ್ರದ ಜವಾಹರ್‌ಲಾಲ್ ನೆಹರೂ ನಗರ ನವೀಕರಣ ಯೋಜನೆ ಯಡಿ 18 ಸಾವಿರ ಕೋಟಿ ರೂ.ಬಳಕೆ ಮಾಡಿಕೊಳ್ಳದೇ ಹಿಂತಿರುಗಿಸಿದೆ. ಅನಗತ್ಯವಾಗಿ ಕೇಂದ್ರ ಸರಕಾರದ ವಿರುದ್ಧ ಟೀಕೆ ಮಾಡುವ ರಾಜ್ಯ ಸರಕಾರ ಕೇಂದ್ರದ ಅನುದಾನ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.


Click it and Unblock the Notifications
