ಶ್ರೀರಾಮುಲು ಪಕ್ಷದ ಕೈ ಹಿಡಿದ ಪೂಜಾ ಗಾಂಧಿ

ಬಳ್ಳಾರಿಯ ಬಿಎಸ್ ಆರ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಪಕ್ಷದ ಸ್ಥಾಪಕ, ಮಾಜಿ ಸಚಿವ ಬಿ ಶ್ರೀರಾಮುಲು, ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ, ನಟಿ ಕಮ್ ರಾಜಕಾರಣಿ ರಕ್ಷಿತಾ ಪ್ರೇಮ್ ಅವರ ಸಮ್ಮುಖದಲ್ಲಿ ಪೂಜಾ ಗಾಂಧಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
'ನಾನು ಬಂದಿರೋದು ಸೋಷಲ್ ಬ್ಯಾಕ್ ಗ್ರೌಂಡ್ ನಿಂದ. ನಾನು ಪಾಸ್ಟ್ ಬಗ್ಗೆ ಮಾತನಾಡಲು ಇಷ್ಟಪಡಲು, ಕೆಜೆಪಿಯಲ್ಲಿ ಆಫರ್ ಸಿಗಲಿಲ್ಲ. ಸುಮ್ಮನೆ ಒಂದು ತಿಂಗಳು ಕುಳಿತಿದ್ದೆ. ಗ್ರಾಸ್ ರೂಟ್ ಲೆವೆಲ್ ನಲ್ಲಿ ಕೆಲಸ ಮಾಡುವ ವ್ಯಕ್ತಿ. ನನಗೆ ಉತ್ತರ ಕರ್ನಾಟಕದಿಂದ ಸ್ಪರ್ಧಿಸುವ ಆಸೆಯಿದೆ. ನಾನು ನಟಿಯಾಗಿ ಪಕ್ಷಗಳನ್ನು ಸೇರುತ್ತಿಲ್ಲ. ನಾನು ಸಾಮಾಜಿಕ ಕಾರ್ಯಕರ್ತೆ. ದಯವಿಟ್ಟು ಈ ಬಗ್ಗೆ ನೀವೆಲ್ಲ ತಿಳಿದುಕೊಳ್ಳಬೇಕು ಎಂದು ಆಂಗ್ಲ ಮಿಶ್ರಿತ ಕನ್ನಡ ಭಾಷೆಯಲ್ಲಿ ಪೂಜಾ ಗಾಂಧಿ ಅವರು ಹೇಳಿದರು.
ರಕ್ಷಿತಾ ಹೇಳಿಕೆ: ಬಿಎಸ್ ಆರ್ ಕಾಂಗ್ರೆಸ್ ಪಕ್ಷ ನನ್ನ ಕುಟುಂಬ ಇದ್ದಂತೆ. ನನಗೆ ಪೂಜಾ ಸೇರ್ಪಡೆಯಿಂದ ಯಾವುದೇ ಬೇಸರವಿಲ್ಲ. ನನಗೆ ಖಂಡಿತ ಟಿಕೆಟ್ ಕೊಟ್ಟೆ ಕೊಡುತ್ತಾರೆ. ಯಾವ ಕ್ಷೇತ್ರ ಎಂದು ಇನ್ನೂ ನಿರ್ಧಾರವಾಗಿಲ್ಲ. ಬಿಎಸ್ ಆರ್ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. ಬಿಎಸ್ ಆರ್ ಪಕ್ಷ ಕುಟುಂಬ ಇದ್ದಂತೆ. ಕುಟುಂಬವನ್ನು ತೊರೆಯಲು ಹೇಗೆ ಸಾಧ್ಯ ಎಂದು ನಟಿ ರಕ್ಷಿತಾ ಪ್ರೇಮ್ ಪ್ರಶ್ನಿಸಿದರು.
ಮೊದಲ ಟಾಸ್ಕ್: ಪಕ್ಷ ಸೇರ್ಪಡೆಗೊಂಡ ಮೇಲೆ ಪೂಜಾ ಗಾಂಧಿ ಅವರು ಬಯಸಿದಂತೆ ಕೈ ತುಂಬಾ ಕೆಲಸ ಸಿಗಲಿದೆ. ಬಳ್ಳಾರಿ, ರಾಯಚೂರು ಹಾಗೂ ಗದಗ ಜಿಲ್ಲೆ ಬಿಸಿಲಿನಲ್ಲಿ ಪಕ್ಷದ ಪರ ಪ್ರಚಾರ ಕಾರ್ಯ ಆರಂಭಿಸಬೇಕಿದೆ. ಸ್ಥಳೀಯ ಚುನಾವಣೆಗಾಗಿ ಪ್ರಚಾರ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಪೂಜಾ ಅವರಿಗೆ ಗೈಡ್ ಮಾಡುವ ಜವಾಬ್ದಾರಿಯನ್ನು ರಕ್ಷಿತಾ ಪ್ರೇಮ್ ಅವರಿಗೆ ವಹಿಸಲಾಗಿದೆ. ಪೂಜಾ ಗಾಂಧಿಗೆ ಬೆಂಗಳೂರಿನ ಟಿಕೆಟ್ ಮೇಲೆ ಕಣ್ಣಿದ್ದರೂ ಉತ್ತರ ಕರ್ನಾಟಕದ ಯಾವುದಾದರೂ ಕ್ಷೇತ್ರದ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆಯಂತೆ.
ಜೆಡಿಎಸ್ ತೊರೆದು ಕೆಜೆಪಿ ಸೇರಿದ್ದ ಪೂಜಾಗಾಂಧಿ ಕೇವಲ ಮೂರೇ ತಿಂಗಳಲ್ಲೇ ಮೂರು ಪಕ್ಷಕ್ಕೆ ಹಾರಿದ್ದಾರೆ. ಸಂಸದೆ ಜೆ.ಶಾಂತಾ, ಸಂಸದ ಸಣ್ಣಪಕ್ಕೀರಪ್ಪ, ಮೇಲ್ಮನೆ ಸದಸ್ಯ ಮೃತ್ಯುಂಜಯ ಜಿನಗ, ಚಿತ್ರನಟಿ ರಕ್ಷಿತಾ, ಮುಖಂಡ ಮದನ್ ಪಟೇಲ್ ಸೇರಿದಂತೆ ಹಲವರು ಪೂಜಾ ಗಾಂಧಿಯನ್ನು ಬರಮಾಡಿಕೊಂಡಿದ್ದಾರೆ. ಪೂಜಾ ಗಾಂಧಿ ಸೇರ್ಪಡೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಗುರುಲಿಂಗನಗೌಡ ಖಚಿತಪಡಿಸಿದ್ದಾರೆ.












Click it and Unblock the Notifications