ಡಿಆರ್‌ಡಿಒ ಮಾಜಿ ವಿಜ್ಞಾನಿ ಎಜಾಝ್ ಸಹ ಮುಕ್ತ ಮುಕ್ತ

ಮೊನ್ನೆಯಷ್ಟೇ ಉದಯೋನ್ಮುಖ ಪತ್ರಕರ್ತ ಮತಿ ಉರ್ ರಹಮಾನ್ ಮತ್ತು ಮುಹಮ್ಮದ್ ಯೂಸುಫ್ ನಾಲಬಂದ್ ಆರೋಪ ಮುಕ್ತರಾಗಿ ಹೊರಬಂದಿದ್ದರು. ಈಗ ಪ್ರತಿಷ್ಠಿತ ಡಿಆರ್‌ಡಿಒ ಸಂಸ್ಥೆಯಲ್ಲಿ ಕಿರಿ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಹುಬ್ಬಳ್ಳಿಯ ಎಜಾಝ್ ಸಹ ಸ್ವತಂತ್ರರಾಗಿದ್ದಾರೆ.
25 ವರ್ಷದ ಎಜಾಝ್ ಅಹ್ಮದ್ ಮಿರ್ಝಾಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯವು ಗುರುವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇಬ್ಬರು ವ್ಯಕ್ತಿಗಳ ಭದ್ರತಾ ಠೇವಣಿ ಹಾಗೂ ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿ ನ್ಯಾ. ಸೋಮನಾಥ್ ಆರ್. ಸಿಂಧಗಿ ಆದೇಶಿಸಿದ್ದಾರೆ.
ದಯಾನಂದ್ ವರ್ಗಾವಣೆ ಶಿಕ್ಷೆ: ಈ ಮಧ್ಯೆ, ರಾಜ್ಯ ಸರಕಾರವು ಮೂವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಶಂಕಿತ ಭಯೋತ್ಪಾದನೆ ಪ್ರಕರಣವನ್ನು ಭೇದಿಸಿದ್ದ ಹಿರಿಯ ಐಪಿಎಸ್ ಬಿ ದಯಾನಂದ್ ಅವರನ್ನು ಸಿಐಡಿ ಪೊಲೀಸ್ ಮಹಾ ನಿರ್ದೇಶಕ, ಆರ್ಥಿಕ ಅಪರಾಧಗಳ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿದೆ.
2012ರ ಆಗಸ್ಟ್ 29ರಂದು ಎಜಾಝ್, ಮತಿ ಉರ್ ಸೇರಿದಂತೆ 16 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ, ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಪತ್ರಕರ್ತ ಸಿದ್ಧಿಕಿ, ಯೂಸೆಫ್ ನಾಲಬಂದ್ ಹಾಗೂ ಏಜಾಜ್ ಅಹಮ್ಮದ್ ಹೆಸರನ್ನು ಕೈ ಬಿಟ್ಟಿತ್ತು. ದೋಷಾರೋಪಪಟ್ಟಿಯಲ್ಲಿ ತಮ್ಮ ಹೆಸರುಗಳೇ ಇಲ್ಲದಿರುವ ಕಾರಣ ಜಾಮೀನು ಕೋರಿ ಏಜಾಜ್ ಮನವಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಗುರುವಾರ ವಿಚಾರಣೆ ನಡೆಸಿತು.
ಆದರೆ ಜಾಮೀನು ಮನವಿಗೆ ಎನ್‌ಎಐ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ತನಿಖೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ದೋಷಾರೋಪ ಪಟ್ಟಿ ಸಲ್ಲಿಸುವ ಅವಕಾಶವಿದೆ. ಹಾಗಾಗಿ ಆರೋಪಿಗೆ ಜಾಮೀನು ನೀಡದಂತೆ ಮನವಿ ಮಾಡಿದರು. ನ್ಯಾಯಾಲಯವು, ಪ್ರಕರಣದ ಹೆಚ್ಚುವರಿ ಆರೋಪಪಟ್ಟಿಯನ್ನು ತ್ವರಿತವಾಗಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.












Click it and Unblock the Notifications