ರಾಷ್ಟ್ರ ನಾಯಕರು ರಾಜ್ಯಕ್ಕೆ ಮರಳುವುದಿಲ್ಲ - ಎಐಸಿಸಿ

ಅನ್ಯ ಪಕ್ಷೀಯರ ಸೇಪರ್ಡೆ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಹೈ ಕಮಾಂಡ್ ನಾಯಕರು ಇಂತಹದ್ದೊಂದು ಸಂದೇಶವನ್ನು ನೀಡಿದ್ದಾರೆ. ಇದರ ಜೊತೆಗೆ ರಾಜ್ಯದ ಯಾವ ಸಚಿವರು ಮತ್ತು ಸಂಸದರಿಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರಲು ಕಾಂಗ್ರಸ್ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ರಾಜ್ಯ ರಾಜಕಾರಣಕ್ಕೆ ಮರಳುವ ಬಗ್ಗೆ ಆಲೋಚನೆ ನಡೆಸುತ್ತಿದ್ದ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಸಂಸದ ಧರ್ಮಸಿಂಗ್ ಮುಂತಾದ ನಾಯಕರಿಗೆ ಭಾರಿ ಹಿನ್ನಡೆ ಉಂಟಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದಿರುವ ಎಐಸಿಸಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯದ ನಾಯಕರಿಗೆ ವಹಿಸಿ, ಚುನಾವಣೆ ಗೆಲ್ಲುವ ತಂತ್ರ ರೂಪಿಸಿದೆ.
ರಾಜ್ಯದ ಆಡಳಿತಾರೂಢ ಬಿಜೆಪಿಯ ಭ್ರಷ್ಟಾಚಾರ, ಸಜ್ಜನ ಪಕ್ಷಪಾತ, ಒಳಜಗಳಗಳಿಂದ ಕಾಂಗ್ರಸ್ ಗೆ ಈ ಬಾರಿ ಅಧಿಕಾರದ ಗದ್ದುಗೆ ಏರುವುದು ಸುಲಭವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿ ಹಲವಾರು ನಾಯಕರು ಕಾಯುತ್ತಿದ್ದಾರೆ. ಆದರೆ, ಹೈಕಮಾಂಡ್ ನಿಲುವಿನಿಂದಾಗಿ ಇವರಿಗೆ ನಿರಾಸೆಯಾಗಿರುವುದಂತೂ ಸತ್ಯ.
ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಚುನಾವಣೆ ಎದುರಿಸುವ ಪದ್ಧತಿ ಕಾಂಗ್ರಸ್ ಪಕ್ಷದಲ್ಲಿ ಇಲ್ಲವಾದರೂ, ಇವರು ಮುಖ್ಯಮಂತ್ರಿಯಾಗಬಹುದು ಎಂಬ ಸೂಚನೆ ದೊರಕುತ್ತಿತ್ತು. ಆದರೆ, ಈ ಬಾರಿ ಸಂಪೂರ್ಣವಾಗಿ ಎಲ್ಲಾ ನಾಯಕರನ್ನು ಚುನಾವಣೆಯಲ್ಲಿ ತೊಡಗಿಸಲು ಕಾಂಗ್ರಸ್ ಹೈಕಮಾಂಡ್ ಇಂತಹ ತಂತ್ರ ರೂಪಿಸಿದೆ ಎನ್ನುವುದು ಪಕ್ಷದ ಉನ್ನತ ಮೂಲಗಳ ಮಾಹಿತಿ.


Click it and Unblock the Notifications
