ಪೊಲೀಸರ ಕುಕೃತ್ಯ: ರೈಲಿಗೆ ಸಿಲುಕಿ ವೃದ್ಧೆ ಸಾವು

ಅತ್ತ ರೈಲ್ವೆ ಸಚಿವ ಬನ್ಸಲ್ ಅವರು ಪ್ರಯಾಣಿಕರ ಸುರಕ್ಷತೆ, ಮಹಿಳೆಯರ ರಕ್ಷಣೆ ಅದೂ ಇದೂ ಅಂತ ರೈಲ್ವೆ ಬಜೆಟ್ ಮಂಡಿಸಿದ ಮಾರನೆಯ ದಿನವೇ ರೈಲ್ವೆ ಪೊಲೀಸರು ಇಂತಹ ಕುಕೃತ್ಯ ನಡೆಸಿದ್ದಾರೆ.
ಇಷ್ಟಕ್ಕೂ ಆ ವೃದ್ಧ ದಂಪತಿ ಮಾಡಿದ ತಪ್ಪಾದರೂ ಏನಪ್ಪಾ ಅಂದರೆ ಪೊರಪಾಟು ಬಿದ್ದು, ಅವರು ಬೇರೊಂದು ರೈಲು ಹತ್ತಿದ್ದರು. ಸಹರಾನಪುರ ಜಿಲ್ಲೆಯಲ್ಲಿ ದೇವಬಂದ್ ಸಮೀಪ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರೈಲು ಪ್ರಯಾಣ ಮಾಡುತ್ತಿದ್ದರು.
ಸುಮಾರು 70 ವರ್ಷದ ವೃದ್ಧ ದಂಪತಿಯಾದ ರಾಜೇಶ್ವರ್ ತ್ಯಾಗಿ ಮತ್ತು ಅವರ ಪತ್ನಿ ಸಂತೋಷ್ ಅವರು ಮುಜಾಫರ್ ನಗರ ರೈಲು ನಿಲ್ದಾಣದಲ್ಲಿ ಅಚಾತುರ್ಯದಿಂದ ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಹತ್ತಿದ್ದಾರೆ.
ರೈಲ್ವೆ ಪೊಲೀಸ್ (RPF) ಸಬ್ ಇನ್ಸ್ ಪೆಕ್ಟರ್ ರಾಮ್ ಚಂದರ್ ಮತ್ತು ಪೇದೆ ಸುಭಾಷ್ ಅವರು ದಂಪತಿ ಪ್ರಯಾಣದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ತಾವು ಸಹರಾನಪುರಕ್ಕೆ ಪ್ರಯಾಣಿಸಬೇಕಾಗಿದೆ. ಹಾಗಾಗಿ ಈ ರೈಲನ್ನು ಹತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.
'ಇದು ಶತಾಬ್ದಿ ಎಕ್ಸ್ ಪ್ರೆಸ್. ಈ ರೈಲು ಸಹರಾನಪುರದಲ್ಲಿ ನಿಲ್ಲುವುದಿಲ್ಲ. ಹಾಗಾಗಿ ತಕ್ಷಣ ರೈಲಿನಿಂದ ಇಳಿಯಿರಿ' ಎಂದು ಆದೇಶಸಿದ್ದಾರೆ. ಆಗ ರೈಲು, ನಿಲ್ದಾಣದಿಂದ ಹೊರಡಲು ಅನುವಾಗುತ್ತಿತ್ತು. ಮತ್ತು ತುಸು ವೇಗವನ್ನೂ ಪಡೆದುಕೊಂಡಿತ್ತು. ಅದೇ ವೇಳೆ ಇಬ್ಬರೂ ಪೊಲೀಸರು ರೈಲು ಬೋಗಿಯ ಬಾಗಿಲು ತೆರೆದು ವೃದ್ಧರಿಬ್ಬರನ್ನೂ ಹೊರಕ್ಕೆ ತಳ್ಳಿಬಿಟ್ಟಿದ್ದಾರೆ.
ವೃದ್ಧ ಮಹಿಳೆ ಸೀದಾ ಪಕ್ಕದ ಹಳಿ ಮೇಲೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಆ ಹಳಿಯ ಮೇಲೆ ಮತ್ತೊಂದು ರೈಲು ಚಲಿಸುತ್ತಿತ್ತು. ಅದು ಮಹಿಳೆಯ ಮೇಲೆ ಹತ್ತಿಕೊಂಡು ಹೋಗಿದೆ. ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.


Click it and Unblock the Notifications
