ಅಡ್ಡಾಡುವ ಒಂಟಿ ಮಹಿಳೆಯರಿಗೆ ಬೆಂಗಳೂರು ಸೇಫ್

ಟ್ರಾವಲ್ ಪೋರ್ಟಲ್ ಟ್ರಿಪ್ಅಡ್ವೈಸರ್ ದೇಶದಲ್ಲಿನ ಯಾವ ನಗರ ಮಹಿಳೆಯರ ಪಾಲಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಎಂಬ ವಿಷಯ ಕುರಿತು ಸಮೀಕ್ಷೆ ನಡೆಸಿದೆ. ಒಟ್ಟು ಶೇ.34ರಷ್ಟು ಮಹಿಳೆಯರು ಮುಂಬೈ ನಗರವನ್ನು ಅತ್ಯಂತ ಸುರಕ್ಷಿತ ಪ್ರದೇಶ ಎಂದು ಹೇಳಿದ್ದಾರೆ. ಬೆಂಗಳೂರು ಮತ್ತು ಅಹ್ಮದಾಬಾದ್ ಎರಡನೇ ಸ್ಥಾನದಲ್ಲಿದ್ದು ಶೇ.12 ಅಂಕಗಳನ್ನು ಗಳಿಸಿವೆ.
ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದರೂ ದೆಹಲಿಯಲ್ಲಿ ಅತ್ಯಾಚಾರಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶೇ.84ರಷ್ಟು ಮಹಿಳೆಯರು ದೆಹಲಿ ಅತ್ಯಂತ ಅಸುರಕ್ಷಿತ ನಗರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ 16ರಂದು 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆದ ನಂತರ, ದೆಹಲಿ ಮಹಿಳೆಯರ ಪಾಲಿನ ಅಪಾಯಕಾರಿ ನಗರ ಎಂಬ ಕುಖ್ಯಾತಿ ಗಳಿಸುತ್ತಲೇ ಸಾಗಿದೆ.
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಗಾರೆ ಕೆಲಸದಿಂದ ಹಿಡಿದು ಸಾಫ್ಟ್ ವೇರ್ ಕಂಪನಿಗಳಲ್ಲಿ ಹಲವಾರು ಹಂತಗಳಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹೇಳುವುದೇನೆಂದರೆ, ಭಾರತಕ್ಕಿಂತ ವಿದೇಶದಲ್ಲಿ ಕೆಲಸ ಮಾಡುವುದು ಮತ್ತು ಒಂಟಿಯಾಗಿ ಅಡ್ಡಾಡುವುದು ಹೆಚ್ಚು ಸುರಕ್ಷಿತ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.
ಶೇ.94ರಷ್ಟು ಮಹಿಳೆಯರು, ಭಾರತದಲ್ಲಿ ತಾವು ಒಂಟಿಯಾಗಿ ಅಡ್ಡಾಡುವಾಗ ಭದ್ರತೆಯ ಸಮಸ್ಯೆ ಯಾವಾಗಲೂ ಮತ್ತು ಆಗಾಗ ಕಾಡುತ್ತಲೇ ಇರುತ್ತದೆ. ಆದರೆ, ವಿದೇಶದಲ್ಲಿ ಹಾಗಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅಭದ್ರತೆ ಎದುರಿಸುತ್ತಿದ್ದರೂ ಅಪರಿಚಿತ ಸ್ಥಳಗಳಲ್ಲಿ ಅಡ್ಡಾಡುವಾಗ ತಮ್ಮ ಜೊತೆ ಮೆಣಸಿನಪುಡಿಯಂತಹ ರಕ್ಷಣಾತ್ಮಕ ಸಾಧನಗಳನ್ನು ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇವರಲ್ಲಿ ಶೇ.37ರಷ್ಟು ಮಹಿಳೆಯರು ತಾವು ಒಂಟಿಯಾಗಿ ಅಡ್ಡಾಡಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದ್ದಾರೆ.
ಹೊರಗಡೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಮತ್ತು ಗೃಹಿಣಿಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಶೇ.78ರಷ್ಟು ಮಹಿಳೆಯರು ತಾವು ಪ್ರವಾಸದಲ್ಲಿದ್ದಾಗ ಮಹಿಳಾ ಹಾಸ್ಟೆಲ್‌ನಲ್ಲಿ ಇರಬಯಸುವುದಾಗಿ ನುಡಿದಿದ್ದಾರೆ. ದೇಶದಲ್ಲಿ ಮಹಿಳೆಯರ ಮೇಲೆ ಎಷ್ಟೇ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದರೂ ಮಹಿಳೆಯರು ಒಂಟಿಯಾಗಿ ಜೀವಿಸುವುದಾಗಲಿ, ಅಡ್ಡಾಡುವುದಾಗಲಿ ಕಡಿಮೆಯಾಗಿಲ್ಲ. ಅಚ್ಚರಿಯ ಸಂಗತಿಯೆಂದರೆ, ಶೇ. 41 ಮಹಿಳೆಯರು ಒಂಟಿಯಾಗಿ ಕೆಲಸಕ್ಕೆ ಹೋಗುವುದನ್ನು ಆನಂದಿಸುವುದಾಗಿ ಹೇಳಿದ್ದರೆ, ಶೇ.76ರಷ್ಟು ಮಹಿಳೆಯರು ಒಂಟಿಯಾಗಿ ರಜಾ ಪ್ರವಾಸ ಕೈಗೊಳ್ಳುವುದನ್ನು ಇಷ್ಟಪಡುವುದಾಗಿ ತಿಳಿಸಿದ್ದಾರೆ.












Click it and Unblock the Notifications