ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ ಪ್ರಸನ್ನ ಕುಮಾರ್

ಜೀವ ಭಯವಿದೆಯೆಂದು ಕರ್ನಾಟಕ ಹೊರತು ಪಡಿಸಿ ಬೇರೆ ರಾಜ್ಯಗಳಲ್ಲಿ ತಿರುಗಾಡುತ್ತಿರುವ ಪದ್ಮನಾಭ ಪ್ರಸನ್ನ ಕುಮಾರ್, ನವದೆಹಲಿಯಲ್ಲಿ ಮಾತನಾಡಿ, ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಜೆಪಿ ಪಕ್ಷದ ಯಾವುದೇ ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ. ಈ ಬಗ್ಗೆ ವಿವರಣೆ ನೀಡಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದರು.
ಯಡಿಯೂರಪ್ಪ ಬೆಂಬಲಿಗರು ಕೆಜೆಪಿ ಅಭ್ಯರ್ಥಿಗಳೆಂದು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ವಿರೋಧಿಸುತ್ತೇನೆ. ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದರು.
ಕೇಂದ್ರ ಚುನಾವಣಾ ಆಯೋಗಕ್ಕೂ ಯಡಿಯೂರಪ್ಪ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದೇನೆ. ಯಡಿಯೂರಪ್ಪ ಮತ್ತು ಅವರ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಇದೆ ಆದ್ದರಿಂದ ಕರ್ನಾಟಕಕ್ಕೆ ಬರುವುದಿಲ್ಲ ಎಂದು ಪುನರುಚ್ಚರಿಸಿದರು.
ಯಡಿಯೂರಪ್ಪ ಕೆಜೆಪಿಗೆ ಅಧಿಕೃತ ಅಧ್ಯಕ್ಷ ಎಂದು ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ. ಇದರಿಂದ ಆಕ್ರೋಶಗೊಂಡಿರುವ ಕೆಜೆಪಿ ಸಂಸ್ಥಾಪಕ ಅಧ್ಯಕ್ಷ ಯಡಿಯೂರಪ್ಪ ಮೇಲೆ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ.
ಶೋಭಾರನ್ನು ಉಚ್ಚಾಟಿಸುವೆ :ಪಕ್ಷದಲ್ಲಿ ಒಡಕಿಗೆ ಕಾರಣವಾಗುತ್ತಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಒಂದೆರಡು ದಿನದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಪ್ರಸನ್ನ ಹೇಳಿದರು.
ಶೋಭಾ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡಬೇಕು. ಆದರೆ, ಅವರು ಸರ್ವಾಧಿಕಾರಿ ವರ್ತನೆ ಪ್ರದರ್ಶಿಸುತ್ತಿದ್ದಾರೆ. ಅವರಿಂದ ಪಕ್ಷದಲ್ಲಿ ಒಡಕು ಉಂಟಾಗುತ್ತಿದ್ದು ಶೀಘ್ರವೇ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತೇನೆ ಎಂದು ಗುಡುಗಿದ್ದಾರೆ.












Click it and Unblock the Notifications