ಕೆಆರ್‌ಎಸ್ ಬಳಿ ಯಡಿಯೂರಪ್ಪ, ಶೋಭಾ ಬಂಧನ
ಬೆಂಗಳೂರು, ಫೆ. 9 : ಕೃಷ್ಣರಾಜ ಸಾಗರ ಅಣೆಕಟ್ಟೆಯಲ್ಲಿ ನೀರಿಲ್ಲದಿದ್ದರೂ ತಮಿಳುನಾಡಿಗೆ ಬಿಜೆಪಿ ಸರಕಾರ ಕಾವೇರಿ ನೀರು ಹರಿಬಿಟ್ಟಿರುವುದನ್ನು ವಿರೋಧಿಸಿ ಕನ್ನಂಬಾಡಿ ಕಟ್ಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತಮಿಳುನಾಡಿನ ಬೆಳೆಗಳನ್ನು ಉಳಿಸಲು ಕರ್ನಾಟಕ 2.44 ಟಿಎಂಸಿ ಅಡಿ ನೀರು ಬಿಡಲೇಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಕೆಆರ್‌ಎಸ್ ಬಳಿ ಗಲಭೆಗಳಾಗುವ ಸಂಭವನೀಯತೆ ಇರುವುದರಿಂದ ಡ್ಯಾಂ ಬಳಿ ಮಂಡ್ಯ ಜಿಲ್ಲಾಡಳಿತ ನಿಷೇಧ ಹೇರಿದೆ. ನಿಷೇಧವನ್ನು ಧಿಕ್ಕರಿಸಿ ಮುತ್ತಿಗೆ ಹಾಕಲು ಯತ್ನಿಸಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಯಡಿಯೂರಪ್ಪ ಮತ್ತಿತರರನ್ನು ಬಂಧಿಸಬೇಕಾಯಿತು.
ಕಾವೇರಿ ನ್ಯಾಯಾಧೀಕರಣ ಅಂತಿಮ ಅಧಿಸೂಚನೆ ಹೊರಡಿಸಬಾರದೆಂದು ಆಗ್ರಹಿಸಿ ಕರ್ನಾಟಕ ಜನತಾ ಪಕ್ಷದ ನಾಯಕ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಮತ್ತು ನೂರಾರು ಬೆಂಬಲಿಗರೊಡಗೂಡಿ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಮತ್ತು ಶೋಭಾ ಜೊತೆ ಇತರ ಬೆಂಬಲಿಗರು ಮತ್ತು ಕಾವೇರಿಗಾಗಿ ಹೋರಾಟ ಮಾಡುತ್ತಿರುವ ನೂರಾರು ರೈತರನ್ನು ಪೊಲೀಸರು ಬಂಧಿಸಿದರು.

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಿದ್ದ ಜಗದೀಶ್ ಶೆಟ್ಟರ್ ಅವರು, ಸುಪ್ರೀಕೋರ್ಟ್ ಆದೇಶಕ್ಕೆ ಮತ್ತು ಕಾನೂನು ಪಂಡಿತರ ಸಲಹೆಗೆ ತಲೆಬಾಗಿ ತಮಿಳುನಾಡಿಗೆ ನೀರು ಹರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಮಂಡ್ಯ ಜಿಲ್ಲೆಯಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಆರ್‌ಎಸ್ ಬಳಿ ಮಾಧ್ಯಮದವರೊಡನೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಪಟ್ಟದಲ್ಲಿ ಕುಳಿತುಕೊಳ್ಳುವ ಎಲ್ಲ ಅರ್ಹತೆಗಳನ್ನು ಜಗದೀಶ್ ಶೆಟ್ಟರ್ ಕಳೆದುಕೊಂಡಿದ್ದಾರೆ. ತಮಿಳುನಾಡಿಗೆ ನೀರು ಹರಿಯಬಿಟ್ಟು ಜನರಿಗೆ ದ್ರೋಹ ಬಗೆದಿದ್ದಾರೆ. ಒಂದು ಕ್ಷಣವೂ ಅವರು ಅಧಿಕಾರದಲ್ಲಿ ಇರಬಾರದು. ಕೂಡಲೆ ರಾಜೀನಾಮೆ ನೀಡಬೇಕು ಎಂದು ಶೆಟ್ಟರ್ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications