ಗಂಗೆ ಹಿಡಿದು ರಾಮ ಮಂದಿರ ಜಪಿಸಿದ ರಾಜನಾಥ
ಅಲಹಾಬಾದ್, ಫೆ.7: ಕುಂಭಮೇಳದಲ್ಲಿ ಪವಿತ್ರ ಗಂಗೆ ಕೈ ಹಿಡಿದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್ ನಾಥ್ ಸಿಂಗ್ ಅವರು ರಾಮ ಮಂದಿರ ನಿರ್ಮಾಣ ಜಪಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಕುಂಭಮೇಳದಲ್ಲಿ ರಾಜಕೀಯ ಬೆರೆಸಿದರೆ ಎಚ್ಚರ ಎಂದು ಆಡಳಿತಾರೂಢ ಸಮಾಜವಾದಿ ಪಕ್ಷ ಗುಡುಗಿದೆ.
ವಿಶ್ವ ಹಿಂದೂ ಪರಿಷತ್ ತೆಗೆದುಕೊಳ್ಳುವ ನಿರ್ಣಯಗಳಿಗೆ ಬಿಜೆಪಿಯಲ್ಲಿ ಬಹುತೇಕ ಒಪ್ಪಿಗೆ ಸಿಕ್ಕಿದೆ. ಹಿಂದೂ ಧರ್ಮದ ಮೌಲ್ಯಗಳಿಗೆ ಪಕ್ಷ ಬದ್ಧವಾಗಿದೆ. ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದು ಶತಃಸಿದ್ಧ. ಇದು ಅಸಂಖ್ಯಾತ ಹಿಂದೂಗಳ ಕನಸಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಯೋಗಿ ಅದಿತ್ಯಾನಾಥ್, ಲಕ್ಷ್ಮಿಕಾಂತ್ ವಾಜಪೇಯಿ, ಪ್ರವೀಣ್ ತೊಗಾಡಿಯಾ ಹಾಗೂ ಅಶೋಕ್ ಸಿಂಘಾಲ್ ಅವರ ಜೊತೆಗೆ ರಾಜನಾಥ್ ಸಿಂಗ್ ಕುಂಭಮೇಳಕ್ಕೆ ಆಗಮಿಸಿದ್ದರೆ. ಮುಂದಿನ ವಾರ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆಯಿದೆ.

ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯ ಮಾನ್ಯ ಮಾಡಿದ ಬಳಿಕವೂ ಅಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಹಿಂದುಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಇದರಿಂದ ಹಿಂದೂ ಧಾರ್ಮಿಕ ನಾಯಕರು, ಸಂತರು ನೊಂದಿದ್ದಾರೆ. ಮತ್ತೊಮ್ಮೆ ಮಂದಿರ ನಿರ್ಮಾಣ ಹೋರಾಟವನ್ನು ಮತ್ತೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ. [ಗ್ಯಾಲರಿ: ಗಂಗೆಯಲ್ಲಿ ಮಿಂದೆದ್ದ ರಾಜನಾಥ]
ಧರ್ಮ ಸಂಸದ್ : ತ್ರಿವೇಣಿ ಸಂಗಮದಲ್ಲಿ 2 ಲಕ್ಷ ಧಾರ್ಮಿಕ ಸಂತರ ಧರ್ಮ ಸಂಸದ್' ನಡೆಯಲಿದೆ. ಬುಧವಾರ 250ಕ್ಕೂ ಅಧಿಕ ಉನ್ನತ ಸಾಧು ಸಂತರ ಮಾಗದರ್ಶಕ ಮಂಡಳಿಯ ಸಮಾವೇಶ ನಡೆದು, ಧರ್ಮಸಂಸದ್‌ನ ಪೂರ್ವಭಾವಿ ಚಿಂತನೆ ನಡೆಸಲಾಯಿತು. ವಿಹಿಂಪದ ವರಿಷ್ಠ ನಾಯಕ ಹಾಗೂ ಅಯೋಧ್ಯಾ ಆಂದೋಲನದ ನೇತೃತ್ವ ವಹಿಸಿರುವ ಮಾ. ಅಶೋಕ್ ಸಿಂಘಾಲ್ ಹಾಗೂ ವಿವಿಧ ಹಿರಿಯ ಸಂತ ಶ್ರೇಷ್ಠರು ಉಪಸ್ಥಿತರಿದ್ದರು.
ಇಲ್ಲಿನ ಮಾರ್ಗದರ್ಶಕ್ ಮಂಡಲ್‌ನ ಆವರಣ ವೇದಿಕೆಯ ಮೇಲೆ ಶ್ರೀರಾಮನ ಭವ್ಯವಾದ ಫಲಕವನ್ನು ಸ್ಥಾಪಿಸಲಾಗಿದೆ. ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಎಂದು ನ್ಯಾಯಾಲಯ ಕೂಡಾ ಆಧಾರಗಳನ್ನು ಪರಿಗಣಿಸಿಯೇ ಒಪ್ಪಿತ್ತು. ದುರದೃಷ್ಟವಶಾತ್ ರಾಜಕೀಯ ಕಾರಣಗಳಿಗಾಗಿ ಅದನ್ನೀಗ 3 ಭಾಗಗಳನ್ನಾಗಿ ಮಾಡಲು ಯತ್ನಿಸಲಾಗಿದೆ.
ಅಲ್ಲದೆ ಹಿಂದುಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡುವ ರಾಜಕೀಯ ಹುನ್ನಾರಗಳು ನಡೆಯುತ್ತಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಧಾರ್ಮಿಕ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ.
ಈಗಾಗಲೇ ಅಯೋಧ್ಯೆಯಲ್ಲಿ ವಿಶ್ವಹಿಂದು ಪರಿಷತ್ತು ಭವ್ಯ ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲ ಕೆತ್ತನೆ ಕಾರ್ಯಗಳನ್ನು ಪೂರ್ಣಗೊಳಿಸಿದೆ. ಕಾಂಗ್ರೆಸ್ ಮತ್ತಿತರ ರಾಜಕೀಯ ಪಕ್ಷಗಳು ವಿಹಿಂಪ ಹಿಂದುಗಳಿಂದ ಸಂಗ್ರಹಿಸಿದ ತಲಾ ಒಂದೂವರೆ ರೂ. ಗಳನ್ನು ಬಿಜೆಪಿ ಚುನಾವಣೆಗೆ ನೀಡಿದೆ ಎಂದೆಲ್ಲ ಅಪಪ್ರಚಾರ ನಡೆಸಿದ್ದರೂ, ವಿಹಿಂಪ ಆ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅತ್ಯಂತ ಜತನದಿಂದ ಕಾಯ್ದಿಟ್ಟಿದೆ.
ಪ್ರತಿ ಹಿಂದುವಿನಿಂದ ಸಂಗ್ರಹಿಸಿದ ಅಷ್ಟೂ ಕಾಣಿಕೆಯನ್ನು ಮಂದಿರ ನಿರ್ಮಾಣ ಕಾರ್ಯದಲ್ಲಿ ಸದ್ವಿನಿಯೋಗ ಮಾಡಲು ಅದು ವಿಶೇಷ ಕಾಳಜಿ ವಹಿಸಿದೆ. ಅಯೋಧ್ಯಾ ಶ್ರೀರಾಮ ಮಂದಿರ ನಿರ್ಮಾಣ ಆಂದೋಲನಕ್ಕೆ ತನ್ನ ಶಕ್ತಿ ಧಾರೆ ಎರೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿಹಿಂಪ, ಧಾರ್ಮಿಕ ಸಂತರನ್ನೊಳಗೊಂಡ ಸಂತ ಮಂಡಳಿಯ ಈ ಧರ್ಮಸಂಸತ್‌ನ ತೀರ್ಮಾನವನ್ನು ಅನುಷ್ಠಾನಕ್ಕೆ ತರಲು ಪೂರ್ತಿ ಬೆಂಬಲ ನೀಡಲಿದೆ. ಇಂದು ಧರ್ಮ ಸಂಸದ್‌ನ ಮಹತ್ವದ ನಿರ್ಧಾರವೊಂದು ಹೊರಳುವ ನಿರೀಕ್ಷೆಯಿದೆ.
ಇತ್ತ ಬಿಜೆಪಿ ಕೂಡಾ ಅಯೋಧ್ಯಾ ಆಂದೋಲನವನ್ನು ಬೆಂಬಲಿಸುವ ನಿರೀಕ್ಷೆಯಿದ್ದು, ಶ್ರೀರಾಮ ಜನ್ಮಭೂಮಿ ಮಂದಿರ ಆಂದೋಲನವು ಒಂದು ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ಪುನರುತ್ಥಾನದ ಆಂದೋಲನವಾಗಿರುವ ನೆಲೆಯಲ್ಲಿ ಇದನ್ನು ಬೆಂಬಲಿಸುವುದು ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಆದ್ಯ ಕರ್ತವ್ಯವೆಂದು ಈಗಾಗಲೇ ಸಂತ ಮಂಡಳಿ, ವಿಹಿಂಪ ಒತ್ತಿ ಹೇಳಿದೆ.












Click it and Unblock the Notifications