ಬಿಜೆಪಿ ಶಾಸಕರಿಗೆ ವಿಪ್. ಯಪ್, ವಿಪ್ ಅಂದ್ರೇನು?

ಬಜೆಟ್ ಅಧಿವೇಶನ ಘೋಷಣೆಯಾದ ನಂತರವೂ 13 ಬಿಜೆಪಿ ಶಾಸಕರು ಪಕ್ಷತೊರೆದು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ಸೇರಿದ್ದರು. ಯಾವ ಶಾಸಕರು ರಾಜೀನಾಮೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿಕೆ ನೀಡುತ್ತಿದ್ದರೂ ಶಾಸಕರು ಪಕ್ಷ ತೊರೆಯುತ್ತಿರುವುದರಿಂದ ಸಹಜವಾಗಿ ಆತಂಕಗೊಂಡಿರುವ ಬಿಜೆಪಿ ವಿಪ್ ಜಾರಿಗೊಳಸಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ತಂತ್ರ ರೂಪಿಸಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ಧತೆ, ಬಿಜಾಪುರದಲ್ಲಿ ಫೆ.9ರಿಂದ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ಎಂದು ಕೆಲವು ಶಾಸಕರು ಹೊರ ಜಿಲ್ಲೆಗಳಲ್ಲಿ ಇದ್ದರೆ, ಬಿಎಸ್ಆರ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ನಾಲ್ವರು ಬಿಜೆಪಿ ಶಾಸಕರು ಶ್ರೀರಾಮುಲು ಜೊತೆ ಬಳ್ಳಾರಿಯಲ್ಲಿ ಪತ್ರಿಭಟನೆ ನಡೆಸುತ್ತಿದ್ದರು. ಇದರಿಂದ ಫೆ.5ರಂದು ಶಾಸಕರಿಲ್ಲದೆ ವಿಧಾನಸೌಧ ಖಾಲಿಯಾಗಿತ್ತು.
ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷಗಳು ಉಭಯ ಸದನಗಳಲ್ಲೂ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಮುಖ್ಯ ಸಚೇತಕ ಸಿದ್ದು ಸವದಿ ಫೆ.15ರ ವರೆಗೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಶಾಸಕರಿಗೆ ವಿಪ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ವಿಪ್ ಅಂದ್ರೆ ಏನು? : ಯಾವುದೇ ಒಂದು ಪಕ್ಷ ತನ್ನ ಶಿಸ್ತನ್ನು ಕಾಪಾಡಿಕೊಳ್ಳಲು ವಿಪ್ಅನ್ನು ಅಸ್ತ್ರದಂತೆ ಬಳಸುತ್ತದೆ. ಬಹುಮತ ಸಾಬೀತು ಪಡಿಸುವ ಸಂದರ್ಭದಲ್ಲಿ, ವಿಧಾನಸಭಾ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು, ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ವಿಪ್ ಮೂಲಕ ಪಕ್ಷದ ಶಾಸಕರಿಗೆ ಸೂಚಿಸಲಾಗುತ್ತದೆ. ಪಕ್ಷದ ಮುಖ್ಯ ಸಚೇತರಕರು ವಿಪ್ ಜಾರಿಗೊಳಿಸಿ ಆದೇಶ ಹೊರಡಿಸುತ್ತಾರೆ. ವಿಪ್ ಜಾರಿಯಾದ ನಂತರ ಅದನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರವನ್ನು ಪಕ್ಷ ಹೊಂದಿರುತ್ತದೆ.












Click it and Unblock the Notifications