ಚಿಕ್ಕನಾಯಕನಹಳ್ಳಿಗೆ ಇಂಜಿನಿಯರಿಂಗ್ ಕಾಲೇಜ್: ರವಿ
ಬೆಂಗಳೂರು, ಫೆ.6 : 'ಅಷ್ಟೆಲ್ಲಾ ಮಾಡಿದ್ದಕ್ಕೆ ಕೊನೆಗೆ ನನಗೇನು ಸಿಕ್ಕಿತು? ಚಿಕ್ಕನಾಯಕನ ಹಳ್ಳಿ ಚಿಪ್ಪು' ಎಂಬ ಮಾತು ಬಯಲು ಸೀಮೆಯಲ್ಲಿ ಜನಜನಿತ. ತೆಂಗು ಬೆಳೆಗೆ ಹೆಸರಾದ ತುಮಕೂರು ಜಿಲ್ಲೆಯ ತಾಲೂಕು ಕೇಂದ್ರ ಚಿಕ್ಕನಾಯಕನ ಹಳ್ಳಿಗೆ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸುವ ಭರವಸೆಯನ್ನು ಉನ್ನತ ಶಿಕ್ಷಣ ಸಚಿವ ಸಿಟಿ ರವಿ ಬುಧವಾರ (ಫೆ.6) ನೀಡಿದ್ದಾರೆ.
ಬಜೆಟ್ ಅಧಿವೇಶನದಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜು ತೆರೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.
ಸಿ.ಟಿ ರವಿ ಅವರ ಹೇಳಿಕೆ ಮುಂದೊಂದು ದಿನ ನಿಜವಾದರೆ ಫೆ,6, 2013 ರಂದು ರವಿ ಅವರು ನೀಡಿದ್ದ ಭರವಸೆಯನ್ನು ಚಿಕ್ಕನಾಯಕನಹಳ್ಳಿ ಜನ ಸುವರ್ಣಾಕ್ಷರದಲ್ಲಿ ಕೆತ್ತಿಟ್ಟುಕೊಳ್ಳಬಹುದು.
ಚಿಕ್ಕನಾಯಕನಹಳ್ಳಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಬೇಕಾದ ಆರ್ಥಿಕ ಇಲಾಖೆ ಅನುದಾನ, ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಮುಂತಾದ ಮೂಲ ಸೌಕರ್ಯಗಳ ಬಗ್ಗೆ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ಕ್ರಮವನ್ನು ಕೈಗೊಳ್ಳಲಿದೆ ಎಂದು ವಿಧಾನಸಭೆಯಲ್ಲಿ ಹೇಳಿದರು,
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿ.ಬಿ ಸುರೇಶ್ ಬಾಬು ಅವರ ಪ್ರಶ್ನೆಗೆ ಉತ್ತರಿಸಿದ ಮಾತನಾಡಿದ ಸಿಟಿ.ರವಿ ಅವರು ನಮ್ಮ ಸರ್ಕಾರ ಬಂದ ಮೇಲೆ ಸುಮಾರು 51 ಪಾಲಿಟೆಕ್ನಿಕ್ ಕಾಲೇಜುಗಳನ್ನು ಆರಂಭಿಸಲಾಗಿದೆ. ಒಂದು ಪಾಲಿಟೆಕ್ನಿಕ್ ಕಾಲೇಜು ನಡೆಸಲು ಸುಮಾರು 20 ಕೋಟಿ ರು ಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಒಟ್ಟು 199 ಇಂಜಿನಿಯರಿಂಗ್ ಕಾಲೇಜು, 299 ಪಾಲಿಟೆಕ್ನಿಕ್ ಕಾಲೇಜುಗಳಿದೆ. ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 11 ಸರ್ಕಾರಿ, ಮೂರು ವಿವಿ, 11 ಖಾಸಗಿ ಅನುದಾನಿತ, 174 ಅನುದಾನ ರಹಿತ ಕಾಲೇಜುಗಳಾಗಿವೆ.
ಪಾಲಿಟೆಕ್ನಿಕ್ ಕಾಲೇಜುಗಳ ಪೈಕಿ 81 ಸರ್ಕಾರಿ, 44 ಖಾಸಗಿ ಅನುದಾನ, 168 ಅನುದಾನ ರಹಿತ, ಆರು 2 ನೇ ಪಾಳಿಯ ಪಾಲಿಟೆಕ್ನಿಕ್ ಇದೆ ಎಂದು ಅಂಕಿ ಅಂಶ ಸಮೇತ ಸಚಿವ ರವಿ ವಿವರಿಸಿದರು.
ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಎರಡು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿದೆ. ಮತ್ತೊಂದು ಅನುದಾನಿತ ಕಾಲೇಜಿದೆ. ಈ ಪರಿಸ್ಥಿತಿಯಲ್ಲಿ ಮತ್ತೊಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅಗತ್ಯತೆ ಇದೆಯೇ ಎಂಬುದರ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈ ಅಧ್ಯಯನ ವರದಿ ಬಂದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ರವಿ ಹೇಳಿದರು.
ಒಟ್ಟಾರೆ, ಚಿಕ್ಕನಾಯಕನಹಳ್ಳಿಗೆ ತೆಂಗಿನ ಫಲ ಸಿಗುತ್ತದೆಯೋ, ಅಥವಾ ಆಶ್ವಾಸನೆ ಈಡೇರದೆ ಬರೀ ಚಿಪ್ಪು(ತೆಂಗಿನ ಕರಟ) ಸಿಗುತ್ತದೋ ಕಾದು ನೋಡಬೇಕಿದೆ.












Click it and Unblock the Notifications